Kalyanarajya

"ಕಾರಟಗಿ ಜೆಸ್ಕಾಂ ಕಚೇರಿಯಲ್ಲಿ 'ವಿಷದ ಬಾಟಲಿ' ಹೈಡ್ರಾಮಾ..!" ...."ವೈರಲ್ ವಿಡಿಯೋದಿಂದ ಎದ್ದ ಪ್ರಶ್ನೆಗಳ ಮಹಾಪೂರ – ಹೈಡ್ರಾಮಕ್ಕೆ ಸಾತ್ ನೀಡಿದ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳ ಪಾತ್ರವೂ ತನಿಖೆಗೆ ಒಳಪಡಲಿ ಎಂಬ ಸಾರ್ವಜನಿಕರ ಆಗ್ರಹ".

 ಕೊಪ್ಪಳ/ಕಾರಟಗಿ: ಕೊಪ್ಪಳ ಜಿಲ್ಲೆಯ ಕಾರಟಗಿ ನಗರದ ಜೆಸ್ಕಾಂ ಸಬ್ ಡಿವಿಜನ್ ಕಚೇರಿಯಲ್ಲಿ ನಡೆದಿರುವ 'ವಿಷದ ಬಾಟಲಿ ಹೈಡ್ರಾಮಾ' ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಚೇರಿಯಲ್ಲೇ ಮೀಟರ್ ರೀಡರ್ ವೈ. ದುರಗಯ್ಯ ಅವರು ಸಹಾಯಕ ಇಂಜಿನಿಯರ್ (ಎ.ಇ.) ನೂರ್ ಫಾತಿಮಾ ಅವರ ವಿರುದ್ಧ ಕಿರುಕುಳದ ಆರೋಪ ಮಾಡುತ್ತಾ, ವಿಷದ ಬಾಟಲಿಯನ್ನು ಹಿಡಿದು ಮೈ ಮೇಲೆ ಸುರಿದು ಸೇವಿಸಲು ಯತ್ನಿಸಿದಂತೆ ಕಾಣುವ ದೃಶ್ಯಗಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ವಿಡಿಯೋವನ್ನು ಗಮನಿಸಿದ ಹಲವರು, ಈ ಘಟನೆ ಸಹಜವಾಗಿ ನಡೆದಿತ್ತೇ ಅಥವಾ ಪೂರ್ವಯೋಜಿತವಾಗಿತ್ತೇ ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಘಟನೆಯ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ (ಇ.ಇ.) ವೀರೇಶ ಎಂ.ವೀರೇಶ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎ.ಇ.ಇ.) ಮಂಜುನಾಥ ಸ್ಥಳದಲ್ಲೇ ಇದ್ದರೂ, ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಿಸುವ ಅಥವಾ ಮಧ್ಯಪ್ರವೇಶಿಸುವ ಪ್ರಯತ್ನ ಸ್ಪಷ್ಟವಾಗಿ ಗೋಚರಿಸದಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಅವರ ನಡೆ-ನುಡಿಗಳ ಬಗ್ಗೆಯೂ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. 

ವಿಷದ ಬಾಟಲಿ ಎಲ್ಲಿಂದ ಬಂತು?

ಈ ಪ್ರಕರಣದಲ್ಲಿ ಅತ್ಯಂತ ಗಂಭೀರವಾಗಿ ಕೇಳಿಬರುತ್ತಿರುವ ಪ್ರಶ್ನೆಯೆಂದರೆ, ಕಚೇರಿಯೊಳಗೆ ವಿಷದ ಬಾಟಲಿ ಹೇಗೆ ಪ್ರವೇಶಿಸಿತು? ಅದನ್ನು ಯಾರು ತಂದರು? ವಿಷವನ್ನು ಸೇವಿಸಲು ಯತ್ನಿಸಿದಂತೆ ಕಾಣುವ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು? ಕಚೇರಿಯಂತಹ ಸರ್ಕಾರಿ ಸ್ಥಳದಲ್ಲಿ ಇಂತಹ ಘಟನೆ ನಡೆಯಲು ಕಾರಣವೇನು? ಎಂಬುದರ ಬಗ್ಗೆ ತನಿಖೆ ಅಗತ್ಯವೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. 


ಅರ್ಧ ದಿನವೂ ಕರ್ತವ್ಯ ನಿರ್ವಹಿಸದ ಅಧಿಕಾರಿಯ ವಿರುದ್ಧ ಕಿರುಕುಳ ಆರೋಪ?: ಅವರು ಕಾರಟಗಿ ಸೆಕ್ಷನ್‌ಗೆ ಕರ್ತವ್ಯಕ್ಕೆ ಹಾಜರಾಗಿ ಅಲ್ಪ ಸಮಯವೇ ಕಳೆದಿರುವ ಸಂದರ್ಭದಲ್ಲಿ ಅವರ ವಿರುದ್ಧ ಕಿರುಕುಳದ ಆರೋಪ ಹೇಗೆ ಮತ್ತು ಯಾವ ಆಧಾರದ ಮೇಲೆ ಮೂಡಿತು ಎಂಬ ಪ್ರಶ್ನೆಯೂ ಚರ್ಚೆಗೆ ಗ್ರಾಸವಾಗಿದೆ. ಈ ಆರೋಪಗಳ ಸತ್ಯಾಸತ್ಯತೆ ಅಧಿಕೃತ ತನಿಖೆಯ ಮೂಲಕವೇ ಸ್ಪಷ್ಟವಾಗಬೇಕಿದೆ.:

ಈ ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ, ಮೀಟರ್ ರೀಡರ್ ವೈ. ದುರಗಯ್ಯ ಅವರು ಸುಮಾರು 12 ವರ್ಷ ಲೈನ್‌ಮನ್ ಆಗಿ ಹಾಗೂ ಕಳೆದ 9 ವರ್ಷಗಳಿಂದ ಮೀಟರ್ ರೀಡರ್ ಆಗಿ, ಒಟ್ಟು ಸುಮಾರು 21 ವರ್ಷಗಳಿಂದ ಕಾರಟಗಿಯಲ್ಲೇ ನಿರಂತರ ಸೇವೆ ಸಲ್ಲಿಸುತ್ತಿರುವುದು. 


ಸಾಮಾನ್ಯವಾಗಿ ಸರ್ಕಾರಿ ಇಲಾಖೆಗಳಲ್ಲಿ ವರ್ಗಾವಣೆ ನೀತಿ ಜಾರಿಯಲ್ಲಿರುವಾಗ, ಒಬ್ಬ ಸಿಬ್ಬಂದಿ ಇಷ್ಟು ದೀರ್ಘಕಾಲ ಒಂದೇ ಕೇಂದ್ರದಲ್ಲಿ ಮುಂದುವರಿದಿರುವುದಕ್ಕೆ ಕಾರಣವೇನು? ಸಂಬಂಧಪಟ್ಟ ಅಧಿಕಾರಿಗಳು ಯಾವ ಆಧಾರದ ಮೇಲೆ ಅವರನ್ನು ಅಲ್ಲಿಯೇ ಮುಂದುವರಿಯಲು ಅವಕಾಶ ನೀಡಿದರು? ಇಲಾಖೆಯ ವರ್ಗಾವಣೆ ನಿಯಮಗಳನ್ನು ಪಾಲಿಸಲಾಗಿತ್ತೇ? ಎಂಬ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. 

ಸಂಪೂರ್ಣ ತನಿಖೆಗೆ ಒತ್ತಾಯ:

ವೈರಲ್ ವಿಡಿಯೋ, ಘಟನಾ ಸ್ಥಳದಲ್ಲಿದ್ದ ಸಿಬ್ಬಂದಿಯ ಪಾತ್ರ, ವಿಷದ ಬಾಟಲಿಯ ಮೂಲ, ಸಂಬಂಧಿತ ಅಧಿಕಾರಿಗಳ ಕ್ರಮ, ದೀರ್ಘಕಾಲದ ಒಂದೇ ಸ್ಥಳದ ಸೇವೆ ಸೇರಿದಂತೆ ಪ್ರಕರಣದ ಪ್ರತಿಯೊಂದು ಆಯಾಮವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ಅಥವಾ ಅಧಿಕಾರಿಯ ವಿರುದ್ಧದ ಆರೋಪಗಳು ತನಿಖೆ ಪೂರ್ಣಗೊಳ್ಳುವವರೆಗೆ ಸಾಬೀತಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಎಲ್ಲರ ಹೇಳಿಕೆಗಳನ್ನು ದಾಖಲಿಸಿ, ವೈರಲ್ ವಿಡಿಯೋ ಹಾಗೂ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ, ವಾಸ್ತವಾಂಶವನ್ನು ಜನರ ಮುಂದಿಡುವುದು ಜೆಸ್ಕಾಂ ಉನ್ನತ ಅಧಿಕಾರಿಗಳ ಜವಾಬ್ದಾರಿಯಾಗಿದೆ. 

Post a Comment

Previous Post Next Post