"ವಿಶೇಷ ವರದಿ"
ಕೊಪ್ಪಳ / ಗಂಗಾವತಿ / ಶ್ರೀರಾಮನಗರ / ಕಾರಟಗಿ : "ಅಂದರ್ ಬಾಹರ್... ಅಂದರ್ ಬಾಹರ್... ಅಂದರ್ ಬಾಹರ್!" – ಕೊಪ್ಪಳ ಜಿಲ್ಲೆಯ ಪ್ರಮುಖ ನಗರಗಳು ಹಾಗೂ ಗಡಿ ಭಾಗದ ಹಳ್ಳಿಗಳಲ್ಲಿ ಈಗ ಎಲ್ಲೆಲ್ಲೂ ಕೇಳಿಸುತ್ತಿರುವ ಸದ್ದು ಇದೊಂದೇ. "ಎಕ್ಕ, ರಾಜ, ರಾಣಿಯರ ಪಣದಾಟದಲ್ಲಿ ಲಕ್ಷ ಲಕ್ಷ ರೂಪಾಯಿಗಳು ನಿಮಿಷಾರ್ಧದಲ್ಲಿ ಕೈಬದಲಾಯಿಸುತ್ತಿವೆ".
"ಹೋಟೆಲ್ & ಲಾಡ್ಜ್ ರೂಮ್‌ಗಳು ಸೀಕ್ರೆಟ್ ಅಡ್ಡೆ" :
ಪೊಲೀಸರ ಕಣ್ಣಿಗೆ ಬೀಳದಿರಲು ನಗರದ ಪ್ರಮುಖ ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ ರೂಮ್‌ಗಳನ್ನು ಕಾಯ್ದಿರಿಸಿ, ಬಾಗಿಲುಗಳನ್ನು ಒಳಗಡೆಯಿಂದ ಬಂದ್ ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ 'ಅಂದರ್ ಬಾಹರ್' ಜೂಜಾಟ ನಡೆಸಲಾಗುತ್ತಿದೆ.
ಗಂಗಾವತಿ ಸಮೀಪದ ದೇವಘಾಟ್, ಸಿದ್ದಿಕೇರಿ, ವಾಣಿಭದ್ರೇಶ್ವರ ಬೆಟ್ಟ, ಗಡ್ಡಿ, ವಿಠಲಾಪುರ ಹಾಗೂ ಜನನಿಬಿಡವಲ್ಲದ ಗುಡ್ಡಗಾಡು ಪ್ರದೇಶಗಳು ರಾತ್ರೋರಾತ್ರಿ ಜೂಜುಕೋರರ ತಾಣಗಳಾಗಿ ಮಾರ್ಪಟ್ಟಿವೆ.
"ರಾಜ್ಯ ಹೆದ್ದಾರಿಯಲ್ಲೇ ನೆರೆ ರಾಜ್ಯದ ಆಟಗಾರರು" :
ಶ್ರೀರಾಮನಗರದ ರಾಜ್ಯ ಹೆದ್ದಾರಿ ಎರಡೂ ಬದಿಗಳಲ್ಲಿ ಅಂದರ್-ಬಾಹರ್ ಆಟ ಭರ್ಜರಿಯಾಗಿ ನಡೆಯುತ್ತಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಂದಲೂ ಕಾರು-ಬೈಕ್‌ಗಳಲ್ಲಿ ಜೂಜುಕೋರರು ಲಗ್ಗೆ ಇಟ್ಟಿದ್ದಾರೆ.
ಗಾಂಜಾ, ಮದ್ಯಪಾನ, ಮಟಕಾ ಹಾಗೂ ಇಸ್ಪೀಟ್ ದಂಧೆಗಳು ಕೊಪ್ಪಳ, ಭಾಗ್ಯನಗರ,ಕುಕನೂರು, ಕುಷ್ಟಗಿ, ಶ್ರೀರಾಮನಗರ, ಆನೇಗುಂದಿ, ಬಸಾಪಟ್ಟಣ, ಕಾರಟಗಿ, ನವಲಿ, ಮರ್ಲಾನಹಳ್ಳಿ, ಯರಡೋಣಾ ಮತ್ತು ಬೂದಗುಂಪಾ, ಸಿದ್ದಾಪುರ ಸೇರಿದಂತೆ ಹಲವು ಊರುಗಳಲ್ಲಿ ಕದ್ದುಮುಚ್ಚಿ ಶರವೇಗ ಪಡೆದುಕೊಂಡಿವೆ. ರಾಜಕಾರಣಿಗಳ ಶಿಫಾರಸುಗಳನ್ನು ಬದಿಗೊತ್ತಿ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆಯ ಆದೇಶಗಳನ್ನು ಈ ದಂಧೆಕೋರರು ಗಾಳಿಗೆ ತೂರಿದ್ದಾರೆ.




