ಕೊಪ್ಪಳ / ಗಂಗಾವತಿ / ಶ್ರೀರಾಮನಗರ: ದೀಪಾವಳಿ ಎಂದರೆ ಕತ್ತಲನ್ನು ಸರಿಸಿ ಬೆಳಕನ್ನು ತರುವ ಪವಿತ್ರ ದೀಪಗಳ ಹಬ್ಬ. ಆದರೆ, ಕೊಪ್ಪಳ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಗಳಾದ ಗಂಗಾವತಿ, ಕಾರಟಗಿ, ಕುಷ್ಟಗಿ ಹಾಗೂ ಕೊಪ್ಪಳ, ಭಾಗ್ಯನಗರಗಳಲ್ಲಿ ದೀಪಾವಳಿ ಬಂದರೆ ಸಾಕು, ಸಂಭ್ರಮಕ್ಕಿಂತ ಹೆಚ್ಚಾಗಿ ಇಸ್ಪೀಟ್ ಹಾಗೂ ಜೂಜಾಟದ ಅಡ್ಡೆಗಳ ಸದ್ದೇ ಜೋರಾಗುತ್ತದೆ! ಬೆಳಕಿನ ಹಬ್ಬದ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪಣಕ್ಕಿಟ್ಟು ಆಡುವ ಈ ಕಾನೂನುಬಾಹಿರ ದಂಧೆಗೆ ನೆರೆ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಜೂಜುಕೋರರು ಹಿಂಡು ಹಿಂಡಾಗಿ ಆಗಮಿಸುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಈ ಹಿಂದೆ ಗಂಗಾವತಿ ಹಾಗೂ ಸುತ್ತಮುತ್ತಲಿನ ಅಚ್ಚಕಟ್ಟು ಪ್ರದೇಶಗಳಲ್ಲಿ ವರ್ಷದ 12 ತಿಂಗಳೂ ನಿರಂತರವಾಗಿ ಇಸ್ಪೀಟ್ ಮತ್ತು ಮಟಕಾ ದಂಧೆಗಳು ನಡೆಯುತ್ತಿದ್ದವು. ಸಿಬಿಎಸ್ ಗಂಜ್, ಹೊಸಳ್ಳಿ ರಸ್ತೆ, ವಿದ್ಯಾನಗರ, ಹೇರೂರು ರಸ್ತೆ, ಸಿದ್ದಿಕೇರಿ, ಶ್ರೀರಾಮನಗರ, ಗುಂಡೂರು ಕ್ಯಾಂಪ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) "ಸಾಹಿಲ್ ಬಾಗ್ಲಾ" ಅವರು ದಿಟ್ಟ ಕಾರ್ಯಾಚರಣೆ ಮೂಲಕ ಕಡಿವಾಣ ಹಾಕಿದ್ದರು.
ಆದರೆ, ದೀಪಾವಳಿ ಸಂದರ್ಭದಲ್ಲಿ ಕನಿಷ್ಠ ಒಂದು ವಾರ ಇಸ್ಪೀಟ್ ಆಡಲು 'ಅನುಮತಿ' ಕೊಡಿಸಬೇಕೆಂದು ಕೆಲ ಜೂಜು ಪ್ರಿಯರು ರಾಜಕಾರಣಿಗಳ ಬೆನ್ನು ಬಿದ್ದು, ಪೋಲಿಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಶಿಫಾರಸು ಮಾಡಿಸಿದ್ದರು ಎನ್ನಲಾಗಿದೆ.
ಈ ಬೆದರಿಕೆ ಹಾಗೂ ಶಿಫಾರಸುಗಳಿಗೆ ಮಣಿಯದ ಕಡಕ್ ಎಸ್ಪಿ ಸಾಹಿಲ್ ಬಾಗ್ಲಾ ಅವರು, "ದೀಪಾವಳಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಹಬ್ಬದ ಮೆರುಗು ಹೆಚ್ಚಿಸಿ. ಅದನ್ನು ಬಿಟ್ಟು ಹೋಟೆಲ್, ರಸ್ತೆ ಬದಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಅಥವಾ ಹಣ ಪಣಕ್ಕಿಟ್ಟು ಜೂಜಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಖಡಕ್ ಎಸ್ಪಿ ನೀಡಿದ ಕಠಿಣ ಎಚ್ಚರಿಕೆಯ ಮಧ್ಯೆಯೂ ಜೂಜುಕೋರರ ಉಪಟಳ ಕಡಿಮೆಯಾಗಿಲ್ಲ. ಪೊಲೀಸರ ಕಣ್ಣಾವಲು ತೀವ್ರವಾಗಿರುವ ಹಿನ್ನೆಲೆಯಲ್ಲಿ ಜೂಜುಕೋರರು ತಮ್ಮ ಕಾರ್ಯತಂತ್ರ ಬದಲಾಯಿಸಿದ್ದಾರೆ.
ನಗರದ ಪ್ರಮುಖ ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ರಹಸ್ಯವಾಗಿ ರೂಮ್ಗಳನ್ನು ಕಾಯ್ದಿರಿಸಿ, ಒಳಗಡೆಯಿಂದ ಬಾಗಿಲು ಹಾಕಿಕೊಂಡು ಭರ್ಜರಿ ಜೂಜಾಟ ನಡೆಸಲಾಗುತ್ತಿದೆ ಎಂಬ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಹಾಗೂ ಪೊಲೀಸರಿಗೆ ಅನುಮಾನ ಬಾರದಂತೆ ಹೋಟೆಲ್ ರೂಮ್ಗಳನ್ನು ಅಕ್ರಮ ದಂಧೆಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
"ಬಾಡಿಗೆ ಮನೆಗಳ ದುರ್ಬಳಕೆ" :
ಲಾಡ್ಜ್ಗಳ ಜೊತೆಗೆ ಪೊಲೀಸರ ಕಣ್ಣಿಗೆ ಮಣ್ಣೆರೆಚಲು ನಗರದ ಸುರಕ್ಷಿತ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಮನೆಗಳನ್ನು ಬಾಡಿಗೆಗೆ ಪಡೆದು ಜೂಜುಕೋರರು ಲಕ್ಷ-ಲಕ್ಷ ಹಣ ಪಣಕ್ಕಿಟ್ಟು ಇಸ್ಪೀಟ್ ಆಡುತ್ತಿದ್ದಾರೆ ಎನ್ನಲಾಗಿದೆ.
ಲಾಡ್ಜ್ಗಳಷ್ಟೇ ಅಲ್ಲದೆ, ಗಂಗಾವತಿ ನಗರಕ್ಕೆ ದೇವಘಾಟ್, ಸಿದ್ದಿಕೇರಿ, ವಾಣಿಭದ್ರೇಶ್ವರ ಬೆಟ್ಟ, ಗಡ್ಡಿ ವಿಠಲಾಪುರ ಸೇರಿದಂತೆ ಜನನಿಬಿಡವಲ್ಲದ ಗುಡ್ಡಗಾಡು ಪ್ರದೇಶಗಳು ಹಾಗೂ ಹೊಲ-ಗದ್ದೆಗಳನ್ನು ಜೂಜಾಟದ ಅಡ್ಡೆಗಳನ್ನಾಗಿ ಮಾಡಿಕೊಳ್ಳಲಾಗಿದೆ.
ಇಷ್ಟೇ ಅಲ್ಲದೆ, ಶ್ರೀರಾಮನಗರ, ಆನೇಗುಂದಿ, ಕಾರಟಗಿ, ಮರ್ಲಾನಹಳ್ಳಿ, ಯರಡೋಣಾ, ಬೂದಗುಂಪಾ, ಸಿದ್ದಾಪುರ ಸೇರಿದಂತೆ ಮುಂತಾದ ಊರುಗಳಲ್ಲಿ ಗಾಂಜಾ, ಮದ್ಯಪಾನ, ಇಸ್ಪೀಟ್ ಹಾಗೂ ಮಟಕಾ ದಂಧೆಗಳು ಕದ್ದುಮುಚ್ಚಿ ಶರವೇಗದಲ್ಲಿ ನಡೆಯುತ್ತಿವೆ.
ವಿಶೇಷವಾಗಿ ಶ್ರೀರಾಮನಗರದ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಲಕ್ಷಾಂತರ ರೂಪಾಯಿ ಹಣ ಪಣಕ್ಕಿಟ್ಟು ಭರ್ಜರಿಯಾಗಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ. ಈ ಆಟಗಳಲ್ಲಿ ಭಾಗವಹಿಸಲು ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ನೂರಾರು ಜೂಜುಕೋರರು ಹರಿದುಬರುತ್ತಿದ್ದಾರೆ.
ದೀಪಾವಳಿಯ ಪವಿತ್ರ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಅಕ್ರಮ ಹೋಟೆಲ್, ಲಾಡ್ಜ್ ಹಾಗೂ ಗುಡ್ಡಗಾಡು ಅಡ್ಡೆಗಳ ಮೇಲೆ ಪೊಲೀಸ್ ಇಲಾಖೆ ತಕ್ಷಣವೇ ದಿಢೀರ್ ದಾಳಿ ನಡೆಸಿ ಕಠಿಣ ಕ್ರಮ ಜರುಗಿಸಬೇಕಿದೆ ಎಂದು ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.





