ಕಾರಟಗಿ, ಜುಲೈ 23: ಕಾರಟಗಿ ತಾಲ್ಲೂಕಿನ ಸಿದ್ದಾಪುರ ಗ್ರಾಮದ *ಸರ್ವೆ ನಂ. 14*ರ ಸರ್ಕಾರಿ ಗೋಮಾಳ ಭೂಮಿಯ ಮೇಲಿನ ಅಕ್ರಮ ಅತಿಕ್ರಮಣವನ್ನು ತಕ್ಷಣ ತೆರವುಗೊಳಿಸಿ, ಸರ್ಕಾರಿ ಭೂಮಿಯನ್ನು ಸಂರಕ್ಷಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿದ್ದಾಪುರ ಗ್ರಾಮದ ಸಾರ್ವಜನಿಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯ ಪ್ರತಿಯನ್ನು ಜಿಲ್ಲಾಧಿಕಾರಿ, ಗಂಗಾವತಿ ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಸಹ ಸಲ್ಲಿಸಲಾಗಿದೆ.
ಮನವಿಯಲ್ಲಿ, ಸಿದ್ದಾಪುರ ಗ್ರಾಮದ ಸರ್ವೆ ನಂ. 14ರ ಗೋಮಾಳ ಭೂಮಿ ಗ್ರಾಮದಲ್ಲಿನ ಜಾನುವಾರುಗಳ ಮೇಯುವಿಕೆಗಾಗಿ ಮೀಸಲಾಗಿರುವ ಸರ್ಕಾರಿ ಆಸ್ತಿಯಾಗಿದ್ದು, ಕಳೆದ ಸುಮಾರು ಎಂಟು ವರ್ಷಗಳಿಂದ ಕೆಲವು ವ್ಯಕ್ತಿಗಳು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಗೋಮಾಳ ಪ್ರದೇಶಕ್ಕೆ ಬೇಲಿ ನಿರ್ಮಿಸಿ ಖಾಸಗಿ ಬಳಕೆಗೆ ಬಳಸುತ್ತಿರುವುದರಿಂದ ಸಾವಿರಾರು ಜಾನುವಾರುಗಳಿಗೆ ಮೇವು ದೊರೆಯದೆ ರೈತರು ಮತ್ತು ಪಶುಸಂಗೋಪಕರಿಗೆ ತೀವ್ರ ಸಂಕಷ್ಟ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ *ರೌಡಿಶೀಟರ್ ಮಹಿಬೂಬ್ ಮುಲ್ಲಾ (ಎಂ.ಡಿ.ಎಸ್.), ಇಮಾಮ್ ತಂದೆ ಅಬ್ದುಲ್ ಸಾಬ್ ಕಟಾಂಬ್ಲಿ, ಯಾಸೀನ್, ಸೋಹೆಲ್, ಹಾಗೂ ತೈಸೀನ್* ಅವರ ಪಾತ್ರದ ಕುರಿತು ಸಮಗ್ರ, ನಿಷ್ಪಕ್ಷಪಾತ ಮತ್ತು ಕಾನೂನುಬದ್ಧ ತನಿಖೆ ನಡೆಸುವಂತೆ ಮನವಿಯಲ್ಲಿ ಕೋರಲಾಗಿದೆ.
ಅಲ್ಲದೆ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಅನ್ವಯ ತುರ್ತು ಸ್ಥಳ ಪರಿಶೀಲನೆ ನಡೆಸುವುದು, ಸರ್ವೇ ಇಲಾಖೆಯ ಮೂಲಕ ಅಧಿಕೃತ ಅಳತೆ ಮಾಡಿ ಅತಿಕ್ರಮಣ ಗುರುತಿಸುವುದು, ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವುದು, ತನಿಖೆಯಲ್ಲಿ ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು, ಗೋಮಾಳ ಭೂಮಿಗೆ ಗಡಿ ಕಲ್ಲುಗಳನ್ನು ಅಳವಡಿಸಿ ಶಾಶ್ವತ ಸಂರಕ್ಷಣೆ ಒದಗಿಸುವುದು ಹಾಗೂ ಭವಿಷ್ಯದಲ್ಲಿ ಮರು ಅತಿಕ್ರಮಣವಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದಲ್ಲದೆ, ಈ ಮನವಿಯ ಕುರಿತು ಕೈಗೊಂಡ ಕ್ರಮದ ವರದಿಯನ್ನು ಲಿಖಿತ ರೂಪದಲ್ಲಿ ಸಾರ್ವಜನಿಕರಿಗೆ ನೀಡುವಂತೆ ಮನವಿ ಮಾಡಲಾಗಿದೆ.
*ಸೂಕ್ತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ*, ಕರ್ನಾಟಕ ಲೋಕಾಯುಕ್ತ, ರಾಜ್ಯ ಕಂದಾಯ ಇಲಾಖೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಭಾರತ ಸಂವಿಧಾನದ ಅನುಚ್ಛೇದ 226ರ ಅಡಿಯಲ್ಲಿ ರಿಟ್ ಅರ್ಜಿ ಸಲ್ಲಿಸುವುದು ಸೇರಿದಂತೆ ಇತರೆ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ ಕುಮಾರಸ್ವಾಮಿ ಅವರು ಅನುಪಸ್ಥಿತಿಯಲ್ಲಿದ್ದ ಕಾರಣಶಿರಸ್ತೇದಾರ ಜಗದೀಶ ಅವರು ಮನವಿ ಸ್ವೀಕರಿಸಿದರು.




