Kalyanarajya

"ಸತತ ನಾಲ್ಕನೇ ಬಾರಿ ಕೋರಂ ಕೊರತೆ: ಸಿದ್ದಾಪುರ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ಮತ್ತೆ ರದ್ದು!"....."ಉಪಾಧ್ಯಕ್ಷರ ಹಾಗೂ ಕೆಲ ಸದಸ್ಯರ ಹುಚ್ಚಾಟ- ತಾರಕಕ್ಕೇರಿದ ಆಡಳಿತಾತ್ಮಕ ಬಿಕ್ಕಟ್ಟು, ಅಭಿವೃದ್ಧಿಗೆ ಬ್ರೇಕ್ – ಜನರಲ್ಲಿ ಅಸಮಾಧಾನ, ಕಾನೂನು ಕ್ರಮಕ್ಕೆ ಒತ್ತಾಯ"

ಕೊಪ್ಪಳ/ಕಾರಟಗಿ : ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದ್ದು, ಜುಲೈ 7ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯೂ ಅಗತ್ಯ ಕೋರಂ ಭರ್ತಿಯಾಗದ ಕಾರಣ ಮತ್ತೆ ರದ್ದಾಗಿದೆ. ಇದರೊಂದಿಗೆ ಸತತ ನಾಲ್ಕನೇ ಬಾರಿ ಸಾಮಾನ್ಯ ಸಭೆ ನಡೆಯದೇ ಉಳಿದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಕಳೆದ ಮೂರು ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿದ್ದರು. ನಾಲ್ಕನೇ ಸಭೆಯೂ ಕೋರಂ ಕೊರತೆಯಿಂದ ರದ್ದಾಗಿರುವುದು ಪಂಚಾಯತಿಯ ಜನಪ್ರತಿನಿಧಿಗಳ ಕಾರ್ಯಕ್ಷಮತೆ ಮತ್ತು ಜವಾಬ್ದಾರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲೇ ವಾರ್ಷಿಕ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು, ಕುಡಿಯುವ ನೀರು, ರಸ್ತೆ, ಸ್ವಚ್ಛತೆ, ಕಲ್ಯಾಣ ಯೋಜನೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹಲವು ವಿಷಯಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಸಭೆಗಳು ಪದೇಪದೇ ನಡೆಯದಿರುವುದರಿಂದ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಗ್ರಾಮ ಪಂಚಾಯತ್ ರಾಜ್ ಕಾಯ್ದೆಯ ಉದ್ದೇಶದಂತೆ, ಸ್ಥಳೀಯ ಆಡಳಿತವು ನಿಯಮಿತ ಸಭೆಗಳ ಮೂಲಕ ಸಾರ್ವಜನಿಕ ಆಡಳಿತವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಸತತ ಸಭೆಗಳು ನಡೆಯದ ಪರಿಸ್ಥಿತಿ ನಿರ್ಮಾಣವಾದರೆ ಅದರ ಕಾರಣಗಳು ಮತ್ತು ಮುಂದಿನ ಕ್ರಮಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಒತ್ತಾಯಗಳು ಕೇಳಿಬರುತ್ತಿವೆ. 

ಈ ಬೆಳವಣಿಗೆಯಿಂದ ಗ್ರಾಮಸ್ಥರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, "ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡಬೇಕು" ಎಂಬ ಒತ್ತಾಯ ಹೆಚ್ಚಾಗಿದೆ. ಪಂಚಾಯತಿಯ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿರುವುದರಿಂದ  ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಈಗ ಎಲ್ಲರ ಗಮನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಮೇಲಾಧಿಕಾರಿಗಳತ್ತ ನೆಟ್ಟಿದೆ—  ಸಿದ್ದಾಪುರ ಗ್ರಾಮ ಪಂಚಾಯತಿಯ ಆಡಳಿತಾತ್ಮಕ ಬಿಕ್ಕಟ್ಟಿಗೆ ಕಾರಣವಾದವರ ಮೇಲೆ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೋಳ್ಳುವರೇ....??? ಕ್ರಮಕೈಗೊಂಡು ಗ್ರಾಮಾಭಿವೃದ್ಧಿಗೆ ಮತ್ತೆ ವೇಗ ನೀಡುವರೇ?" ಎಂದು ಈ ಎಲ್ಲಾ ಘಟನೆಗಳಿಂದ ಬೇಸತ್ತ ಜನ ಕಾದುನೋಡುತ್ತಿದ್ದಾರೆ.

Post a Comment

Previous Post Next Post