ಕೊಪ್ಪಳ/ಕಾರಟಗಿ:ಸಿದ್ದಾಪುರ ಗ್ರಾಮ ಪಂಚಾಯತಿಯ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿವೆ. ಕಳೆದ ಮೂರು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿ, ಅಧ್ಯಕ್ಷೆಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು, ಜುಲೈ 7ರಂದು ನಡೆಯಲಿರುವ ಸಾಮಾನ್ಯ ಸಭೆಯ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಗ್ರಾಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಬಾರಿಯೂ ಸಭೆಗೆ ಗೈರಾಗುವ ಮೂಲಕ ತಮ್ಮ ಹಿಂದಿನ ನಿಲುವಿಗೆ (ಆರೋಪಕ್ಕೆ) ಬದ್ಧರಾಗಿರುತಾರೆಯೇ...? ಅಥವಾ ಸಭೆಗೆ ಹಾಜರಾಗಿ ಇದುವರೆಗೆ ನಡೆಸಿದ ಸಭೆಗೆ ಗೈರಾಗುವ ತಂತ್ರಕ್ಕೆ ತಾವೇ ತೆರೆ ಎಳೆದು ಸೋಲು ಒಪ್ಪಿಕೊಂಡರು' ಎಂಬ ಟೀಕೆಗೆ ಗುರಿಯಾಗುತ್ತಾರೆಯೇ"...? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಒಂದೆಡೆ ಗ್ರಾಮ ಪಂಚಾಯತಿಯ ಆಡಳಿತಾತ್ಮಕ ಕಾರ್ಯಗಳು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸಾಮಾನ್ಯ ಸಭೆಗಳು ನಿರ್ಣಾಯಕವಾಗಿದ್ದರೆ, ಮತ್ತೊಂದೆಡೆ ಉಪಾಧ್ಯಕ್ಷರು ಹಾಗೂ ಸದಸ್ಯರು ಕೈಗೊಳ್ಳುವ ನಿರ್ಧಾರವು ಅವರ ರಾಜಕೀಯ ನಿಲುವಿನ ಮೇಲೂ ಸಾರ್ವಜನಿಕರ ಮೌಲ್ಯಮಾಪನಕ್ಕೂ ಕಾರಣವಾಗುವ ಸಾಧ್ಯತೆ ಇದೆ.
ಜುಲೈ 7ರ ಸಾಮಾನ್ಯ ಸಭೆ ಕೇವಲ ಆಡಳಿತಾತ್ಮಕ ಸಭೆಯಾಗಿ ಉಳಿಯಲಿದೆ, ಉಪಾಧ್ಯಕ್ಷರು ಹಾಗೂ ಸದಸ್ಯರ ರಾಜಕೀಯ ನಿಲುವು ಮತ್ತು ಮುಂದಿನ ಹೆಜ್ಜೆಯನ್ನು ನಿರ್ಧರಿಸುವ ಮಹತ್ವದ ವೇದಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಗ್ರಾಮಸ್ಥರು ಈಗ ಒಂದೇ ಪ್ರಶ್ನೆ ಕೇಳುತ್ತಿದ್ದಾರೆ—ಉಪಾಧ್ಯಕ್ಷರು ಹಾಗೂ ಸದಸ್ಯರು ತಮ್ಮ ಆರೋಪಕ್ಕೆ (ನಿಲುವಿಗೆ) ಬದ್ಧರಾಗಿ ಗೈರಾಗುತ್ತಾರೆಯೇ...? ಅಥವಾ ಸಭೆಗೆ ಹಾಜರಾಗಿ 'ಸೋಲು ಒಪ್ಪಿಕೊಂಡರು' ಎಂಬ ಟೀಕೆಗೆ ಗುರಿಯಾಗುತ್ತಾರೆಯೇ"...? ಕಾದು ನೋಡಬೇಕಾಗಿದೆ.

