ಮುಖ್ಯ ಅಂಶಗಳು:
▪ ಸಿದ್ದಾಪುರ ಗ್ರಾಮದ 2ನೇ ವಾರ್ಡಿನಲ್ಲಿ ರಸ್ತೆ ಒತ್ತುವರಿ ಆರೋಪ
▪ ಸಾರ್ವಜನಿಕರು ಸಹಿ ಸಂಗ್ರಹಿಸಿ ಗ್ರಾಮ ಪಂಚಾಯತಿಗೆ ದೂರು
▪ ಅಕ್ರಮ ಕಟ್ಟಡಗಳಿಂದ ಸಂಚಾರಕ್ಕೆ ತೀವ್ರ ತೊಂದರೆ
▪ ರಸ್ತೆ ಅಗಲಿಕರಣ ಮಾಡಿ **30 ಅಡಿ ರಸ್ತೆ** ಮಾಡಲು ಒತ್ತಾಯ.
ಕಾರಟಗಿ: ಸಿದ್ದಾಪುರ ಗ್ರಾಮದ 2ನೇ ವಾರ್ಡಿನಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸಿ, ರಸ್ತೆ ಅಗಲಿಕರಣ ಮಾಡಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ದೂರು ಸಲ್ಲಿಸಿದ್ದಾರೆ.
ಸಿದ್ದಾಪುರ ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಪಂಚಾಯತಿಗೆ ಮನವಿ ಸಲ್ಲಿಸಿದ ದೃಶ್ಯ.
ಗ್ರಾಮದ ಹಲವಾರು ನಿವಾಸಿಗಳು ಸಹಿ ಸಂಗ್ರಹಿಸಿ ಸಲ್ಲಿಸಿದ ಮನವಿಯಲ್ಲಿ, ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಜನರಿಗೆ ಸಂಚಾರ ಮಾಡಲು ತುಂಬಾ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮಸ್ಥರ ಆರೋಪದ ಪ್ರಕಾರ ಸಿದ್ರದಲಿಂಗಪ್ಪ ಅಗಸರ್ ಅವರು ರಸ್ತೆ ಒತ್ತುವರಿ ಮಾಡಿ, ಕಟ್ಟಡ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದಲ್ಲದೆ ಸಂಜೀವಪ್ಪ ದೇವಸ್ಥಾನದಿಂದ ಭಾವಿ ಪ್ರಕಾಶ ಅವರ ಮನೆಯವರೆಗೆ ಮತ್ತು ಸುರೇಶ ಬಸೆಟ್ಟರ್ ಅವರ ಮನೆಯಿಂದ ವಿರುಪಣ್ಣ ಹೊಸಮನಿ (ಕಣಕ) ಅವರ ಮನೆಯವರೆಗೆ ಸಾರ್ವಜನಿಕ ರಸ್ತೆಯ ಮೇಲೆ ಈಗಾಗಲೇ ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಸಿದ್ದಾಪುರ ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಪಂಚಾಯತಿಗೆ ಮನವಿ ಸಲ್ಲಿಸಿದ ಮನವಿ ಪತ್ರ.
ಗ್ರಾಮದ ಎರಡನೇ ವಾರ್ಡಿನಲ್ಲಿ ಯಾರಾದರು ಮೃತ ಪಟ್ಟಾಗ ಮೃತ ದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಸಾಗಿಸಲು ಸಹ ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಗ್ರಾಮದಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಸಹಿ ಮಾಡಿ ಪಂಚಾಯತಿಗೆ ಮನವಿ ಸಲ್ಲಿಸಿರುವುದು.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆಯನ್ನು 30 ಅಡಿ ಅಗಲಿಕರಣ ಮಾಡುವ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


