ಕೊಪ್ಪಳ: ಜಿಲ್ಲೆಯ ಎಲ್ಲಾ ನಗರಗಳ ರಸ್ತೆಗಳ ಇಕ್ಕೆಲದಲ್ಲಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಸ್ಥರು ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ಪ್ರಾಸ್ಟಿಕ್ ಸೇರಿದಂತೆ ಇತರೆ ನಿಷೇಧಿತ ವಸ್ತುಗಳನ್ನು ಯಥೇಚ್ಛವಾಗಿ ಬಳಸಿ, ಎಗ್ ರೈಸ್, ಗೋಬಿ, ಪಾನಿ ಪೂರಿ, ಬೇಲ್ ಪೂರಿ, ಇಡ್ಲಿ, ಬಜಿ ಸೇರಿದಂತೆ ಇತರೆ ತಿಂಡಿ, ತಿನಿಸುಗಳನ್ನು ಮಾರಾಟ ಮಾಡುವ ಮೂಲಕ ಹೋಟೆಲ್, ಅಂಗಡಿ, ಎಗ್ ರೈಸ್ ಬಂಡಿಗಳ ಮಾಲಕರು ನಿಯಮ ಹಾಗೂ ಕಾನೂನು ಉಲ್ಲಂಘನೆ ಮುಂದುವರಿಸಿದ್ದಾರೆ.
ಈ ಬೀದಿ ಬದಿ ವ್ಯಾಪಾರಸ್ಥರು ಬಹಿರಂಗವಾಗಿ ನಿಯಮ ಹಾಗೂ ಕಾನೂನು ಉಲ್ಲಂಘಿಸುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಕಣ್ಣು ಮುಚ್ಚಿ ಕುಳಿತ್ತಿರುವುದಾದರ ಯಾಕೆ....? ಎಂಬ ಅನುಮಾನ ಜನ-ಮಾನಸದಲ್ಲಿ ಹರಿದಾಡುತ್ತಿದೆ.
ನಿಷೇಧಿತ ವಸ್ತುಗಳನ್ನು ಬಳಸಬಾರದು ಎಂಬ ನಿಯಮ ಇದ್ದರೂ ಸಹ ಅಂಗಡಿಗಳ ಮಾಲಿಕರು ಆರೋಗ್ಯಕ್ಕೆ ಮತ್ತು ಪರಿಸರ ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳನ್ನು ಬಳಸುತ್ತಿದ್ದಾರೆ.
ಬೀದಿ ಬದಿಯ ಸಣ್ಣ ಸಣ್ಣ ಹೋಟೆಲ್ ಹಾಗೂ ಬಂಡಿಗಳಲ್ಲಿ ಯಥೇಚ್ಛವಾಗಿ ನಿಷೇಧಿತ ವಸ್ತುಗಳ ಬಳಕೆ ಮಾಡುತ್ತಿರುವುದರಿಂದ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ, ಯಲಬುರ್ಗ, ಕುಕನೂರು, ಶ್ರೀರಾಮನಗರ ಸೇರಿದಂತೆ ಜಿಲ್ಲೆಯ ಜನತೆ ಆರೋಗಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿದೆ.
ಹೆಚ್ಚುತ್ತಿರುವ ನಿಷೇಧಿತ ಪ್ಲಾಸ್ಟಿಕ್ ಹಾಗೂ ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆಯ ಅಂಗಡಿಗಳು ಮತ್ತು ಹೋಟೆಲ್ ಗಳು:
ಬೀದಿಬದಿ ಹೋಟೆಲ್ ಮತ್ತು ಅಂಗಡಿಗಳಲ್ಲಿ ಅಸ್ವಚ್ಛತೆ, ನಿಷೇಧಿತ ವಸ್ತುಗಳ ಬಳಕೆ ಹಾಗೂ ಪರವಾನಗಿ ಪಡೆಯದ ಆರೋಪ ಇದ್ದರೂ ಸಹ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಆಯಾ ನಗರಗಳ ಪೌರಾಡಳಿತ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತಿದ್ದಾರೆ.
ಇದರಿಂದಾಗಿ ದಿನದಿಂದ ದಿನಕ್ಕೆ ಜಿಲ್ಲೆಯ ಎಲ್ಲಾ ನಗರಗಳ ಪ್ರಮುಖ ರಸ್ತೆಗಳ ಬೀದಿಬದಿಯಲ್ಲಿ ಹಾಗೂ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ನಾಯಿ ಕೊಡೆಯಂತೆ ಸಣ್ಣ - ಸಣ್ಣ ಹೋಟೆಲ್ ಹಾಗೂ ಅಂಗಡಿಗಳು ಆರಂಭವಾಗುತ್ತಿವೆ. ಆಹಾರ ಸೇವಿಸಲು ತೆರಳುವ ಗ್ರಾಹಕರಿಗೆ ನೀಡುವ ಎಗ್‌ರೈಸ್, ಗೋಬಿ, ಪಾನಿಪೂರಿ, ಬೇಲ್ ಪೂರಿ, ಗಿರಮಿಟ್ಟಾ, ಬಜಿ, ಇಡ್ಲಿ ಸೇರಿದಂತೆ ಇತರೆ ಆಹಾರ ಪದಾರ್ಥಗಳಲ್ಲಿ ನಿಷೇಧಿತ ಟೇಸ್ಟಿಂಗ್ ಪೌಡರ್, ಕೃತಕ ಬಣ್ಣ ಮತ್ತು ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಆಹಾರ ಸೇವಿಸುವ ಗ್ರಾಹಕರ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಈ ಅಂಗಡಿ ಹಾಗೂ ಹೋಟೆಲ್ ಕಾರರು ಸ್ವಚ್ಚತೆ ಕಾಪಾಡದೇ ಕಸವನ್ನು ಬಿಸಾಡುವುದರಿಂದ ಸುತ್ತಲಿನ ಪರಿಸರವು ಸಹ ಹಾಳಾಗಿ ಜನರ ಆರೋಗ್ಯದ ಮೇಲೆ ತೊಂದರೆ ಉಂಟಾ ಮಾಡುತ್ತಿದೆ.
ಈಗಲಾದರು ಸಂಬಂಧಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಆಯಾ ನಗರಗಳ ಪೌರಾಡಳಿತ ಅಧಿಕಾರಿಗಳು ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ಮತ್ತು ಪ್ಲಾಸ್ಟಿಕ್ ಸೇರಿದಂತೆ ಇತರೆ ನಿಷೇಧಿತ ವಸ್ತುಗಳನ್ನು ಬಳಕೆ ಮಾಡುತ್ತಿರುವ ಹಾಗೂ ಕಸವನ್ನು ಎಲ್ಲುಂದರಲ್ಲಿ ಚಲ್ಲಾಡಿ ಸುತ್ತಮುತ್ತ ಪರಿಸರವನ್ನು ಹಾಳುಮಾಡುತ್ತಿರುವ ಬೀದಿಬದಿಯ ಹೋಟೆಲ್, ಅಂಗಡಿ ಹಾಗೂ ಬಂಡಿ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ತೆಗೆದುಕೊಂಡು, ನಿಷೇಧಿತ ವಸ್ತುಗಳನ್ನು ಬಳಕೆ ಮಾಡದಂತೆ ಕ್ರಮವಹಿಸುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡಬೇಕೆದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.




