Kalyanarajya

ಸಿದ್ದಾಪುರ : ಸ್ಥಳೀಯ ಆಡಳಿತ ಮತ್ತು ಪುರಾತತ್ವ ಇಲಾಖೆ ನಿರ್ಲಕ್ಷ್ಯ : ನಾಶವಾಗುತ್ತಿರುವ ಪುರಾತನ ಊರಿನ ಕುರುಹುಗಳು, ಶಿಲಾಶಾಸನ ಮತ್ತು ವೀರಗಲ್ಲುಗಳು.


ಕಾರಟಗಿ/ಸಿದ್ಧಾಪುರ : ರಾಜ್ಯ ಪುರಾತತ್ವ ಇಲಾಖೆ ಮತ್ತ  ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬರುವ ಸಾವಿರಾರು ವರ್ಷಗಳ ಇತಿಹಾಸ ಇರುವ ಹಳೇ ಊರಿನ ಕುರುಹುಗಳು, ಶಿಲಾಶಾಸನ ಮತ್ತು ವೀರಗಲ್ಲುಗಳು ಅವನತಿಯತ್ತ ಸಾಗಿದ್ದು, ಇತಿಹಾಸ ಸಂಶೋಧಕರು ಇವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.

ಸ್ವಾರ್ಥದ ಬದುಕಿಗಾಗಿ ಸಾವಿರಾರು ವರ್ಷಗಳ ಇತಿಹಾಸ ಇರುವ ಹಳೇ ಊರಿನ ಕುರುಹುಗಳನ್ನು ನಾಶ ಪಡಿಸಿ ಪುರಾತನ ಕಾಲದ ಹಳೆ ಊರನ್ನು ಅತಿಕ್ರಮಿಸಿಕೊಂಡಿದ್ದಲ್ಲದೇ,  ಮೌಢ್ಯತೆಯಿಂದಾಗಿ ಇಲ್ಲಿನ ಶಾಸನ, ವೀರಗಲ್ಲುಗಳ ಮೇಲೆ ಸುಣ್ಣ-ಬಣ್ಣ ಬಳಿಯಲಾಗುತ್ತಿದೆ. ದೇವರ ಸ್ವರೂಪ ಎಂಬ ಕಾರಣಕ್ಕೆ ಎಣ್ಣೆ ಸುರಿದು ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುತ್ತಿದೆ. ಅಲ್ಲದೇ  ಈ ಪ್ರದೇಶ ವ್ಯಾಪ್ತಿಯಲ್ಲಿರುವ ಶಾಸನ, ಅಪರೂಪದ ಕಲ್ಲುಗಳು ಸಾರ್ವಜನಿಕ ರಸ್ತೆಯ ಬದಿ, ದೇವಸ್ಥಾನಗಳ ಮುಂಭಾಗದಲ್ಲಿ ಅನಾಥವಾಗಿ ಬಿದ್ದಿವೆ. ಗ್ರಾಮದ ನಾನಾ ಕಡೆಗಳಲ್ಲಿ ವೀರಗಲ್ಲುಗಳು, ಶಾಸನಗಳು ಸಂರಕ್ಷಣೆ ಇಲ್ಲದೆ ಹಾಗೇ ಬಿದ್ದಿವೆ. ಸಿದ್ಧಿಪುರುಷರ ಸ್ಥಾನವೆಂದೇ ಪ್ರಸಿದ್ಧಿಯಾಗಿರುವ ಸಿದ್ಧಾಪುರ ಗ್ರಾಮದಲ್ಲಿ ಎರಡು-ಮೂರು ಶಾಸನಗಳು, ಅನೇಕ ವೀರಗಲ್ಲುಗಳು, ಪುರಾತನ ಭಾವಿಗಳು ಹಾಗೂ ಬಹಳ ವರ್ಷಗಳ ಹಿಂದಿನ ಎರೆಡು ಹಳೇ ಊರುಗಳ ಪ್ರದೇಶಗಳು ಇವೆ.  

ಎಲ್ಲೆಲ್ಲಿ....? ಏನೇನು....? :

ಸಿದ್ಧಾಪುರ ಗ್ರಾಮ ಹಾಗೂ ಹಳ್ಳದ ಪಕ್ಕಕ್ಕೆ ಹೊಂದಿಕೊಂಡಿರುವ ಕೃಷ್ಣಾಪುರ ಗ್ರಾಮವು ಬಹಳ ಪುರಾತನ ಕಾಲದ ಗ್ರಾಮಗಳಾಗಿದ್ದು, ಈ ಎರೆಡು ಗ್ರಾಮಗಳಿಗೆ ಮಹಾಭಾರತ ಮತ್ತು ರಾಮಾಯಣ ಕಾಲದ ಇತಿಹಾಸ ಕೂಡ ಇದೆ ಎನ್ನಲಾಗುತ್ತಿದೆ. ಎರೆಡು ಗ್ರಾಮದಲ್ಲಿಯೂ ಸಹ ಬಹಳ ವರ್ಷಗಳ ಹಿಂದೆ ಜನ ವಸತಿ ಮಾಡಿರುವ ಕುರುಹುಗಳಿರುವ ಹಳೇ ಊರುಗಳಿವೆ. ಪುರಾತನ ಕುರುಹಗಳಿರುವ ಈ ಹಳೆಯ ಊರುಗಳನ್ನು ಇಂದು ಕೆಲವರು ಅತಿಕ್ರಮಿಸಿಕೊಂಡಿದ್ದು, ಅಲ್ಲಿ ದನಕರುಗಳ ಶೆಡ್ ಗಳನ್ನು ಹಾಗೂ ಬಣವೆಗಳನ್ನು ಹಾಕಿಕೊಂಡಿದ್ದಲ್ಲದೇ, ಮನೆಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಅತಿಕ್ರಮಿಸಿಕೊಂಡಿದ್ದಾರೆ. 

ನಶಿಸಿ ಹೋಗುತ್ತಿರುವ ವೀರಗಲ್ಲುಗಳು: ಸಿದ್ದಾಪುರ ಗ್ರಾಮದ ಶ್ರೀ ಈಶ್ವರ, ವೆಂಕಟೇಶ್ವರ, ಆಂಜಿನೇಯ ದೇವಸ್ಥಾನಕ್ಕೆ ತಿರುಪತಿಯ ನಂಟು ಇರುವ ಇತಿಹಾಸ ಕೂಡ ಇದೆ. ಈ ದೇವಸ್ಥಾನಗಳ ಆವರಣದಲ್ಲಿ ವೀರಗಲ್ಲುಗಳು ಇದ್ದು, ಇವುಗಳು ನಿರ್ಲಕ್ಷ್ಯದಿಂದಾಗಿ  ಸಂಪೂರ್ಣವಾಗಿ ನಶಿಸಿ ಹೋಗುತ್ತಿವೆ. 

   ಕಳ್ಳರ ಕ್ರೌರಕ್ಕೆ ಬಲಿಯಾಗಿರುವ ಶಿಲಾ ಶಾಸನ :

ಸಿದ್ದಾಪುರ ಹಳ್ಳಕ್ಕೆ ಹೊಂದಿಕೊಂಡಿರುವ ಕೃಷ್ಣಾಪುರದ ರಾಮಾಯಣ ಕಾಲದ ಇತಿಹಾಸ ಇರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಇದೆ. ಈ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಲಿಂಗುವನ್ನು ತನ್ನ ಶಾಪ ವಿಮೋಚನೆಗಾಗಿ ಸ್ವತಃ ಶ್ರೀ ರಾಮನೇ ಸ್ಥಾಪಿಸಿದ್ದಾನೆ ಎನ್ನುವ ವಾಡಿಕೆ ಇದೆ. ಇಂತಹ ಮಹತ್ವ ಇರುವ ದೇವಸ್ಥಾನದ ಪಕ್ಕದಲ್ಲಿ  ಶಿಲಾಶಾಸನ ಇದೆ.  ಇದು ಯಾರ ಕಾಲದ ಶಿಲಾಶಾಸನ ಎಂಬುವುದು ಇದುವರೆಗೂ ತಿಳಿದು ಬಂದಿಲ್ಲ, ಯಾವ ಉದ್ದೇಶಕ್ಕಾಗಿ ಈ ಶಿಲಾಶಾಸನ ನಿರ್ಮಿಸಿದರು, ಈ ಶಿಲಾಶಾಸನದಲ್ಲಿ ಏನಿದೆ ಎಂಬುವುದು ಇದುವರೆಗೂ ಯಾರಿಗೂ ಗೊತ್ತಾಗಿಲ್ಲ, ಶಿಲಾಶಾಸನದಲ್ಲಿ ಇರುವ ಲಿಪಿಯನ್ನು ಸಾಮಾನ್ಯವಾಗಿ ಯಾರಿಂದಲೂ ಓದಲಾಗುತ್ತಿಲ್ಲ. ಇಲ್ಲಿ ನಿಧಿ ಇರಬಹುದು ಎಂದು ಭಾವಿಸಿ, ಅನೇಕ ಬಾರಿ ಅನೇಕ ಕಳ್ಳರು ನಿಧಿ ಆಸೆಗಾಗಿ ಈ ಶಿಲಾಶಾಸನವನ್ನು ಕೆಡವಿ,ವಿಕೃತಗೊಳಿಸಿದ್ದಾರೆ.  ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯದಿಂದಾಗಿ ಈ ಶಿಲಾಶಾಸನವು ಇಂದು ಅನಾಥವಾಗಿ ಬಿದ್ದಿದೆ. 

ವಿನಾಶದತ್ತ ಪುರಾತನ ಬಾವಿ:  ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದುಗಡೆ, ಕಾರಟಗಿ ರಸ್ತೆಗೆ ಹೊಂದಿಕೊಂಡು ಬಹಳಷ್ಟು ಪುರಾತನ ಕಾಲದ ಬಾವಿ ಇದ್ದು, ಇದನ್ನು ಎಂದು ಕರೆಯಲಾಗುತ್ತಿದೆ. ಈ ಬಾವಿಯ ಒಳಗಡೆ ಗುಹೆಗಳು, ಈಶ್ವರ ಲಿಂಗು, ಐದು/ಏಳು ಹೆಡೆಯ ಸರ್ಪಗಳ ನಾಗದೇವತೆ ಮೂರ್ತಿಗಳು ಸೇರಿದಂತೆ ಅನೇಕ ಕೆತ್ತನೆಗಳಿಂದ ಒಳಗೊಂಡಿದೆ. ಇಷ್ಟೊಂದು ಮಹತ್ವ ಇರುವ ಈ ಪುರಾತನ ಬಾವಿಯ ಬಗ್ಗೆ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಹಾಗೂ ಸ್ಥಳಿಯ ಆಡಳಿತ ಸೇರಿದಂತೆ ಸರಕಾರದ ಯಾವುದೇ ಇಲಾಖೆಯು ಸಹ ಇತ್ತಕಡೆ ತಿರುಗಿಯೂ ನೋಡಿಲ್ಲ. ಹೀಗಾಗಿ ಈ ಪುರಾತನ ಬಾವಿಯ ಸುತ್ತಮುತ್ತಲಿನ ಪ್ರದೇಶವನ್ನು ಕೆಲವರು ಅತಿಕ್ರಮಿಸಿಕೊಂಡು, ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಾವಿಯು ಪಾಳು ಬಿದ್ದು ಹಾಳಾಗಿ ಹೋಗಿದೆ, ಇನ್ನು ಕೆಲವು ದಿನಗಳ ಕಾಲ ಹೀಗೆ ಬಿಟ್ಟರೆ ಸದರಿ ಪುರಾತನ ಬಾವಿಯು ಸಂಪೂರ್ಣ ನಾಶವಾಗುವುದರಲ್ಲಿ ಎರೆಡು ಮಾತಿಲ್ಲ. 

ಒಟ್ಟಾರೆಯಾಗಿ ಹೇಳಬೇಕೆಂದರೆ ರಾಜ್ಯ ಪ್ರಾಚ್ಯ ವಸ್ತು ಮತ್ತು ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯದಿಂದಾಗಿ ಕಾರಟಗಿ ತಾಲೂಕಿನ ಸಿದ್ದಾಪುರ ಮತ್ತು ಕೃಷ್ಣಾಪುರ ಗ್ರಾಮಗಳಲ್ಲಿ ಐತಿಹಾಸಿಕ ಶಾಸನ, ವೀರಗಲ್ಲುಗಳು ಮತ್ತು ಪುರಾತನ ಬಾವಿಗಳು ಮತ್ತು ಹಳೆಯ ಪಳೆಯುಳಿಕೆ ಇರುವ ಗ್ರಾಮದ ಪ್ರದೇಶಗಳು  ಸೇರಿದಂತೆ ಸ್ಮಾರಕಗಳ ಕಲ್ಲುಗಳು ಸಂರಕ್ಷಣೆ ಇಲ್ಲದೇ ಹಾಳಾಗುವ ಮೂಲಕ ಸಿದ್ದಾಪುರ ಮತ್ತು ಕೃಷ್ಣಾಪುರದ ಇತಿಹಾಸ ಹುದಿಗಿಹೋಗುತ್ತಿದೆ. 

ಈಗಲಾದರೂ ಸ್ಥಳೀಯ ಆಡಳಿತ ಮತ್ತು ಪ್ರಾಚ್ಯ ವಸ್ತು ಹಾಗೂ ಪುರಾತತ್ವ ಇಲಾಖೆಯು ಎಚ್ಚೆತ್ತುಕೊಂಡು ಸಿದ್ದಾಪುರ ಹಾಗೂ ಕೃಷ್ಣಾಪುರ ಗ್ರಾಮಗಳ ಪುರಾತನ ಕಾಲದ ಹಳೇ ಊರುಗಳನ್ನು, ಶಿಲಾಶಾಸನ, ವೀರಗಲ್ಲುಗಳು, ದೇವಸ್ಥಾನಗಳು ಹಾಗೂ ಬಾವಿಗಳನ್ನು ಸಂರಕ್ಷಸಿ, ಸಂಶೋಧನೆ ಮಾಡುವ ಮೂಲಕ ಇಲ್ಲಿನ ಇತಿಹಾಸವನ್ನು ಎಲ್ಲರಿಗೂ ತಿಳಿಯುವಂತೆ ಮಾಡಬೇಕೆಂದು ಗ್ರಾಮದ ಯುವಕರ ಒಕ್ಕೊರಲಿನ ಒತ್ತಾಯವಾಗಿದೆ. - ಮಲ್ಲಿಕಾರ್ಜುನಗೌಡ ಹೊಸಮನಿ,ಸಿದ್ದಾಪುರ



Post a Comment

Previous Post Next Post