Kalyanarajya

"ಸುದ್ದಿ ವರದಿ ಬಂದ ಮೇಲಷ್ಟೇ ಎಚ್ಚೆತ್ತ ಸಿದ್ದಾಪುರ ಪಂಚಾಯತಿ ಅಧಿಕಾರಿ : 3 ದಿನಗಳ ಬಳಿಕ ರಾಣಿ ಚನ್ನಮ್ಮ ಜಯಂತಿ ಆಚರಿಸಿ ಕರ್ತವ್ಯ ಲೋಪ ಮುಚ್ಚಿಹಾಕಲು ಪಿಡಿಒ ಜ್ಯೋತಿ ರೆಡ್ಡಿ ಯತ್ನ! ಕನ್ನಡ ಪರ ಸಂಘಟನೆ ಆರೋಪ".

ಕೊಪ್ಪಳ / ಕಾರಟಗಿ: ಮಹಾನ್ ದೇಶಪ್ರೇಮಿ, ವೀರ ವನಿತೆ ಕಿತ್ತೂರ ರಾಣಿ ಚನ್ನಮ್ಮ ಅವರ ಜಯಂತಿಯನ್ನು ನಿಗದಿತ ದಿನದಂದು ಆಚರಿಸದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದ ಸಿದ್ದಾಪುರ ಗ್ರಾಮ ಪಂಚಾಯತಿ ಅಧಿಕಾರಿಗಳು, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದಾರೆ! 


ದಿನಾಂಕ 23 ಅಕ್ಟೋಬರ್ 2026 ರಂದು ದೇಶಾದ್ಯಂತ ಕಿತ್ತೂರ ರಾಣಿ ಚನ್ನಮ್ಮ ಜಯಂತಿಯನ್ನು ಆಚರಿಸಬೇಕಿದ್ದರೂ, ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಮಾತ್ರ ಅಂದು ಜಯಂತಿ ಆಚರಿಸದೆ ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು. ಎಂಎಲ್‌ಸಿ (ಶಿಕ್ಷಕರ) ಚುನಾವಣೆ ಬೂತ್ ಹಾಗೂ ನಿಷೇಧಾಜ್ಞೆಯ ನೆಪವೊಡ್ಡಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಹಾನ್ ಚೇತನಕ್ಕೆ ಗೌರವ ಸಲ್ಲಿಸುವ ಸೌಜನ್ಯವನ್ನೂ ತೋರಿರಲಿಲ್ಲ.


ಮಾಧ್ಯಮಗಳ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು:
ಪಂಚಾಯತಿಯ ಈ ಘೋರ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದ ವಿರುದ್ಧ ಮಾಧ್ಯಮಗಳಲ್ಲಿ ಖಾರವಾದ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಮತ್ತು ಕನ್ನಡ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ "ಪಿಡಿಒ ಜ್ಯೋತಿ ರೆಡ್ಡಿ" ಹಾಗೂ ಸಿಬ್ಬಂದಿ ವರ್ಗದವರು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಮೇಲಾಗುವ ಶಿಸ್ತು ಕ್ರಮದಿಂದ ತಪ್ಪಿಸಿಕೊಳ್ಳಲು, ಬರೋಬ್ಬರಿ ಮೂರು ದಿನಗಳ ನಂತರ (ಅಕ್ಟೋಬರ್ 26) ನಿಗದಿತ ವಾಲ್ಮೀಕಿ ಜಯಂತಿಯ ದಿನದಂದೇ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನೂ ಸೇರಿಸಿ ಆಚರಿಸಿದ್ದಾರೆ.



"ಇಂದು ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಿಸಲಾಯಿತು. ಹಾಗೂ ದಿ. 23 ಅಕ್ಟೋಬರ್ 2026 ಗ್ರಾಮ ಪಂಚಾಯತ್ ಕಚೇರಿ MLC ಚುನಾವಣೆ ಬೂತ್  (ನಿಷೇಧಾಜ್ಞೆ) ಇದ್ದ ಪ್ರಯುಕ್ತ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿಯನ್ನು ಇಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಆಚರಿಸಲಾಯಿತು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಕರ್ತವ್ಯ ಲೋಪವನ್ನು ಮುಚ್ಚಿಹಾಕಲು ಪಿಡಿಒ ಜ್ಯೋತಿ ರೆಡ್ಡಿ ಯತ್ನಿಸಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ. 


ವೀರ ವನಿತೆಯನ್ನು ನಿರ್ಲಕ್ಷಿಸಿ, ಈಗ ಕರ್ತವ್ಯ ಲೋಪ ಮುಚ್ಚಿಕೊಳ್ಳಲು ನಾಟಕವಾಡುತ್ತಿರುವುದು ಖಂಡನೀಯ, ಕಠಿಣ ಕ್ರಮ ಕೈಗೊಳ್ಳಿ - ವೆಂಕಟೇಶ ಮಾಂತಾ :
ಈ ಕುರಿತು ಹೇಳಿಕೆ ನೀಡಿರುವ ಕರುನಾಡು ಜನಸಂರಕ್ಷಣಾ ವೇದಿಕೆ ರಾಜಾಧ್ಯಕ್ಷ ವೆಂಕಟೇಶ ಮಾಂತಾ ಅವರು, "ಮಾಧ್ಯಮಗಳಲ್ಲಿ ಸುದ್ದಿ ಬಂದು, ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಮೇಲೆ ಮೂರು ದಿನಗಳ ಬಳಿಕ  ಜಯಂತಿ ಆಚರಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಚುನಾವಣೆ ನೆಪ ಹೇಳಿ ಕಿತ್ತೂರ ರಾಣಿ ಚನ್ನಮ್ಮನಂತಹ ವೀರ ವನಿತೆಯನ್ನು ನಿರ್ಲಕ್ಷಿಸಿ, ಈಗ ಕರ್ತವ್ಯ ಲೋಪ ಮುಚ್ಚಿಕೊಳ್ಳಲು ನಾಟಕವಾಡುತ್ತಿರುವುದು ಖಂಡನೀಯ. ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ, ಯಾವಾಗ ಬೇಕಾದರೂ ಅವಾಗ ಜಯಂತಿ ಮಾಡುವುದು ಅಕ್ಷಮ್ಯ ಅಪರಾಧ, ಯಾವಾಗ ಬೇಕಾದರೂ ಆವಾಗ ಜಯಂತಿ ಮಾಡುವುದಕ್ಕೆ ಪಂಚಾಯತಿ ಏನು ಅವರ ಮನೆ ಅಲ್ಲ, ಪಂಚಾಯತಿ ಒಂದು ಸಾಂವಿಧಾನಿಕ ಕಛೇರಿ, ಇಲ್ಲಿ ಎಲ್ಲಾ ಕೆಲಸಗಳು ಸಂವಿಧಾನದ ಅಡಿಯಲ್ಲಿ ನಡೆಯಬೇಕು. ಹೀಗಾಗಿ ತಪ್ಪು ಮಾಡಿದ ಪಿಡಿಒ ಜ್ಯೋತಿ ರೆಡ್ಡಿ ಹಾಗೂ ಸಂಬಂಧಪಟ್ಟವರ ವಿರುದ್ಧ ಮೇಲಧಿಕಾರಿಗಳು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು", ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದ್ದಾರೆ. 
......................................................................

Post a Comment

Previous Post Next Post