ಕಾರಟಗಿ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಯಾವುದೇ ರೀತಿಯ ಬರವಣಿಗೆ ನೈಪುಣ್ಯತೆ, ಮಾನ್ಯತೆ, ಮತ್ತು ವೃತ್ತಿಪರ ಅರ್ಹತೆ ಇಲ್ಲದಿದ್ದರೂ ಕೆಲವರು ತಮ್ಮ ಬೈಕ್ ಹಾಗೂ ಕಾರುಗಳ ಮೇಲೆ "PRESS" ಎಂದು ಬರೆಸಿಕೊಂಡು ಪತ್ರಕರ್ತರೆಂದು ಹೇಳಿಕೊಂಡು ತಿರುಗಾಡುತ್ತಿರವುದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಪ್ರಕಾರ, ಪತ್ರಿಕೋದ್ಯಮದ ಮೂಲಭೂತ ಜ್ಞಾನ, ವೃತ್ತಿಪರ ಜವಾಬ್ದಾರಿ ಮತ್ತು ಮಾನ್ಯತೆ ಹಾಗೂ ಬರವಣಿಗೆ ನೈಪುಣ್ಯತೆ ಇಲ್ಲದಿದ್ದರೂ ಸಹ ಕೆಲವರು "PRESS" ಹೆಸರಿನ ಪ್ರಭಾವವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಮೇಲೆ ಅನಗತ್ಯ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಇಂತಹ ಬೆಳವಣಿಗೆಗಳಿಂದ ನೈಜ ಪತ್ರಕರ್ತರ ಗೌರವಕ್ಕೂ, ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ:ವಾಹನಗಳ ಮೇಲೆ ಅನಧಿಕೃತವಾಗಿ "PRESS" ಎಂಬ ಫಲಕ ಅಥವಾ ಸ್ಟಿಕ್ಕರ್ ಬಳಸುವವರ ವಿರುದ್ಧ ಪರಿಶೀಲನೆ ನಡೆಸಬೇಕು.
ಪತ್ರಕರ್ತರೆಂದು ಪರಿಚಯಿಸಿಕೊಳ್ಳುವವರು ತಮ್ಮ ಅಧಿಕೃತ ಗುರುತಿನ ಚೀಟಿ ಮತ್ತು ಸಂಬಂಧಿತ ಮಾಧ್ಯಮ ಸಂಸ್ಥೆಯ ವಿವರವನ್ನು ಹೊಂದಿರಬೇಕು. ಇವೆಲ್ಲವುಕ್ಕೂ ಮೊದಲು ಬರವಣಿಗೆ ನೈಪುಣ್ಯತೆ ಹೊಂದಿರಬೇಕು.
ಪತ್ರಿಕೋದ್ಯಮದ ಹೆಸರಿನಲ್ಲಿ ವಂಚನೆ, ಬೆದರಿಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ನೈಜ ಪತ್ರಕರ್ತರ ಗೌರವ ಮತ್ತು ವಿಶ್ವಾಸವನ್ನು ಕಾಪಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಕುರಿತು ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು.
ಪತ್ರಿಕೋದ್ಯಮವು ಕೇವಲ ವಾಹನದ ಮೇಲೆ "PRESS" ಎಂದು ಬರೆಸಿಕೊಳ್ಳುವುದರಿಂದ ಸಿಗುವ ಹುದ್ದೆಯಲ್ಲ; ಅದು ಬರವಣಿಗೆಯ ನೈಪುಣ್ಯತೆ ಹೊಂದಿರುವುದರ ಜೊತೆಗೆ ಸತ್ಯ, ಪ್ರಾಮಾಣಿಕತೆ, ಜವಾಬ್ದಾರಿ ಮತ್ತು ಜನಸೇವೆಯ ಮೌಲ್ಯಗಳ ಮೇಲೆ ನಿಂತಿರುವ ವೃತ್ತಿಯಾಗಿದೆ.
ಆದ್ದರಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಕ್ಷಣ ವಿಶೇಷ ಪರಿಶೀಲನೆ ನಡೆಸಿ, ವಾಹನಗಳ ಮೇಲೆ ಅನಧಿಕೃತವಾಗಿ "PRESS" ಎಂದು ಬರೆಸಿಕೊಂಡು ವಂಚನೆ, ಬೆದರಿಕೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಪ್ರಕರಣಗಳನ್ನು ದಾಖಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಘೋಷಣೆ:
"ಪತ್ರಿಕೋದ್ಯಮದ ಪಾವಿತ್ರ್ಯ ಉಳಿಯಲಿ – ನಕಲಿ ಪತ್ರಕರ್ತರ ಹಾವಳಿ ನಿಲ್ಲಲಿ!"
"PRESS ಎಂಬ ಪದಕ್ಕೆ ಗೌರವ ಇರಲಿ – ದುರುಪಯೋಗಕ್ಕೆ ಅವಕಾಶ ಇರಬಾರದು!"
"ನೈಜ ಪತ್ರಕರ್ತರಿಗೆ ಗೌರವ ನೀಡಿ – ಪತ್ರಿಕೋದ್ಯಮದ ಹೆಸರಿನಲ್ಲಿ ನಡೆಯುವ ವಂಚನೆಗೆ ಕಾನೂನಿನ ಮೂಲಕ ಕಟ್ಟುನಿಟ್ಟಿನ ಕಡಿವಾಣ ಹಾಕಿ!"


