Kalyanarajya

ಕಚೇರಿಯನ್ನೇ ಖಾಸಗಿ ಸಮಾರಂಭದ ವೇದಿಕೆಯಾಗಿ ಬಳಸಿದ ಗ್ರಾ.ಪಂ. ಅಧ್ಯಕ್ಷೆ? ಸಿದ್ದಾಪುರ ಗ್ರಾ.ಪಂ.ನಲ್ಲಿ ವಿವಾಹ ವಾರ್ಷಿಕೋತ್ಸವ ಆಚರಣೆ: ಬರೀ ನೋಟಿಸ್ ಕೊಟ್ಟು ಕೈ ತೊಳೆದು ಕೊಂಡ ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ.

ಸಿದ್ದಾಪುರ(ಕೊಪ್ಪಳ): ಸರ್ಕಾರಿ ಕಚೇರಿಯ ಗೌರವ ಮತ್ತು ನಿಯಮಗಳನ್ನು ಧಿಕ್ಕರಿಸಿ, ಗ್ರಾಮ ಪಂಚಾಯತಿ ಕಚೇರಿಯನ್ನೇ ಖಾಸಗಿ ಸಮಾರಂಭದ ವೇದಿಕೆಯಾಗಿ ಬಳಸಿದ ಆರೋಪ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಗಂಗಾ ಬೋವಿ ಅವರ ವಿವಾಹ ವಾರ್ಷಿಕೋತ್ಸವವನ್ನು ಗ್ರಾ.ಪಂ. ಕಚೇರಿಯೊಳಗೇ ಕೆಲ ಸದಸ್ಯರು, ಸಿಬ್ಬಂದಿ ಹಾಗೂ ಬೆಂಬಲಿಗರು ಆಚರಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 

ಮೇ 15ರಂದು ನಡೆದ ಈ ಕಾರ್ಯಕ್ರಮದಲ್ಲಿ ಕಚೇರಿಯೊಳಗೆ ಕೇಕ್ ಕಟ್ ಮಾಡುವುದು, ಸಂಭ್ರಮಾಚರಣೆ ನಡೆಸುವುದು ಹಾಗೂ ಸಿಬ್ಬಂದಿಯೇ ಭಾಗಿಯಾಗಿರುವ ಫೋಟೋ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಸರ್ಕಾರಿ ಕಚೇರಿಗಳನ್ನೇ ಖಾಸಗಿ ಆಸ್ತಿಯಂತೆ ಬಳಸಲಾಗುತ್ತಿದೆಯೇ?” ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ, ಗ್ರಾಮ ಪಂಚಾಯತಿ ಕಚೇರಿ ಸಾರ್ವಜನಿಕ ಆಡಳಿತಕ್ಕಾಗಿ ಮಾತ್ರ ಮೀಸಲಾಗಿರುವ ಸಂಸ್ಥೆ. ಅಲ್ಲಿನ ಕಟ್ಟಡ, ಪೀಠೋಪಕರಣ, ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳು ಜನಸೇವೆಗೆ ಮಾತ್ರ ಬಳಸಬೇಕಾಗಿದ್ದು, ಖಾಸಗಿ ಕಾರ್ಯಕ್ರಮಗಳಿಗೆ ಬಳಸುವುದು ಸ್ಪಷ್ಟ ನಿಯಮ ಉಲ್ಲಂಘನೆ ಎಂದು ತಿಳಿದುಬಂದಿದೆ. ಆದರೂ ಸಹ ಅಧಿಕಾರ ಮತ್ತು ಹುದ್ದೆಯ ದುರುಪಯೋಗ ಮಾಡಿಕೊಂಡು ಕಚೇರಿಯಲ್ಲೇ ವೈಯಕ್ತಿಕ ಕಾರ್ಯಕ್ರಮ ನಡೆಸಿರುವುದು ಗಂಭೀರ ಅನಾಚಾರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಜಿಲ್ಲಾ ಪಂಚಾಯತಿ ಮತ್ತು ತಾಲೂಕ ಪಂಚಾಯತಿಗೆ ಅಧಿಕೃತ ದೂರು ಸಲ್ಲಿಸಿದ್ದು, ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮೇ 18ರಂದು ನೋಟಿಸ್ ಜಾರಿಯಾಗಿದೆ ಎಂದು ತಿಳಿದುಬಂದಿದೆ.

ಆದರೆ “ನೋಟಿಸ್ ಕೊಟ್ಟು ಕೈ ತೊಳೆದುಕೊಂಡರೆ ಸಾಲದು” ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರಿ ಕಚೇರಿಯನ್ನೇ ಖಾಸಗಿ ಸಂಭ್ರಮಕ್ಕೆ ಬಳಸಿದವರ ವಿರುದ್ಧ ಕೇವಲ ವಿವರಣೆ ಕೇಳುವುದಲ್ಲ, ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದು ಇತರ ಪಂಚಾಯತಿಗಳಿಗೂ ತಪ್ಪು ಸಂದೇಶ ನೀಡಲಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. 

ಸಾಮಾನ್ಯ ಜನರು ಕಚೇರಿಗೆ ಸಣ್ಣ ಕೆಲಸಕ್ಕೆ ಹೋದರೂ ನಿಯಮ, ಸಮಯ, ದಾಖಲೆಗಳ ಹೆಸರಿನಲ್ಲಿ ತಿರುಗಾಡಿಸುವ ವ್ಯವಸ್ಥೆಯಲ್ಲೇ, ಅಧಿಕಾರದಲ್ಲಿರುವವರು ಕಚೇರಿಯನ್ನೇ ಖಾಸಗಿ ಹಬ್ಬದ ಮಂದಿರವನ್ನಾಗಿ ಬಳಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಉಂಟುಮಾಡಿದೆ.

“ಸರ್ಕಾರಿ ಕಚೇರಿ ಜನರದು, ಯಾರೊಬ್ಬರ ವೈಯಕ್ತಿಕ ಸ್ವತ್ತು ಅಲ್ಲ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಪಂಚಾಯತಿಯ ಅಧ್ಯಕ್ಷರು, ಅಧ್ಯಕ್ಷರ ಪತಿ ಮತ್ತು ಕೆಲ ಸದಸ್ಯರು, ಕೆಲ ಸಿಬ್ಬಂದಿಗಳು ಸೇರಿದಂತೆ ವಿವಾಹ ವಾರ್ಷಿಕೋತ್ಸವನ್ನು ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿ, ಆಚರಣೆ ಮಾಡಿದ ಕೆಲ ಸಾರ್ವಜನಿಕರ ಮೇಲೂ ಸೂಕ್ತ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಯುವಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Post a Comment

Previous Post Next Post