Kalyanarajya

ಕಾರ್ಯದರ್ಶಿಯ ದೀರ್ಘಾವಧಿ ಪ್ರಭಾರಿ ನೇಮಕಾತಿಯಿಂದ ಸಿದ್ದಾಪುರ ಗ್ರಾ.ಪಂ. ಕಾರ್ಯಗಳಿಗೆ ತೊಂದರೆ: ಸಾರ್ವಜನಿಕರ ಆಕ್ರೋಶ.

 ಕೊಪ್ಪಳ: ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಕಾರ್ಯದರ್ಶಿಯಾಗಿರುವ ಶ್ರೀಧರ ಸಾ ಅವರು ಕಳೆದ ಸುಮಾರು 6-7 ವರ್ಷಗಳಿಂದ ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ (ಪ್ರಭಾರಿ) ಕಾರ್ಯನಿರ್ವಹಿಸುತ್ತಿರುವ ಪರಿಣಾಮ ಸಿದ್ದಾಪುರ ಗ್ರಾಮ ಪಂಚಾಯತಿಯ ದೈನಂದಿನ ಆಡಳಿತ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಈ ಕುರಿತು ಪತ್ರಕರ್ತರಾದ ಮಲ್ಲಿಕಾರ್ಜುನ ಹೆಚ್ ಅವರು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲು ಸಿದ್ಧತೆ ‌ಮಾಡಿಕೊಳ್ಳುತ್ತಿದ್ದಾರೆ. ಮೂಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿ ದೀರ್ಘಾವಧಿಯಿಂದ ಬೇರೆ ಹುದ್ದೆಯಲ್ಲಿ ಪ್ರಭಾರಿಯಾಗಿ ಮುಂದುವರಿದಿರುವುದರಿಂದ ಗ್ರಾಮ ಪಂಚಾಯತಿಯ ಆಡಳಿತ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರ ಜನನ-ಮರಣ ಪ್ರಮಾಣ ಪತ್ರ, ಇ-ಸ್ವತ್ತು, ತೆರಿಗೆ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಅನೇಕ ದೈನಂದಿನ ಕೆಲಸಗಳು ವಿಳಂಬವಾಗುತ್ತಿವೆ. 

ಸದರಿ ಕಾರ್ಯದರ್ಶಿಯನ್ನು ಜಿಲ್ಲಾ ಪಂಚಾಯತಿಗೆ ಪ್ರಭಾರಿ ಆಗಿ ನಿಯೋಜನೆ ಮಾಡಿರುವುದರಿಂದ ಪಂಚಾಯತಿಯ ಎಲ್ಲಾ ಕೆಲಸ ಕಾರ್ಯಗಳನ್ನು ಪಿಡಿಓ ಅವರು ಒಬ್ಬರೇ ನಿರ್ವಹಿಸಬೇಕಾಗಿದೆ. ಇದರಿಂದಾಗಿ ಕಾರ್ಯದರ್ಶಿಯ ನೇರ ಮೇಲ್ವಿಚಾರಣೆ ಅಗತ್ಯವಿರುವ ಅನೇಕ ಕಡತಗಳು ಬಾಕಿ ಉಳಿಯುತ್ತಿದ್ದು, ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

“ ಸಿದ್ದಾಪುರ ಗ್ರಾಮ ಪಂಚಾಯತಿಯು "ಎ"  ದರ್ಜಿಯ ಪಂಚಾಯತಿ ಆಗಿರುವುದರಿಂದ ಇಲ್ಲಿ ಎಲ್ಲಾ ಸಿಬ್ಬಂದಿಗಳ ಅವಶ್ಯಕತೆ ಇದೆ, ವಿಶೇಷವಾಗಿ ಕಾರ್ಯದರ್ಶಿಯ ಅವಶ್ಯಕತೆ ತುಂಬಾ ಇದೆ. ಕಾರ್ಯದರ್ಶಿ ಇಲ್ಲದ್ದರಿಂದ ಎಲ್ಲಾ ಕೆಲಸ ಕಾರ್ಯಗಳ ಭಾರ ಪಿಡಿಓ ಅವರ ಮೇಲೆ ಬಿದ್ದಿದೆ. ಇದರಿಂದಾಗಿ ಆಡಳಿತ ವ್ಯವಸ್ಥೆ  ಅಸ್ತವ್ಯಸ್ತಗೊಂಡಿದೆ. ಕಾರ್ಯದರ್ಶಿಯ ಅನುಪಸ್ಥಿತಿಯಿಂದ ಸಾಮಾನ್ಯ ಜನರ ಸಮಸ್ಯೆಗಳು ಹೆಚ್ಚುತ್ತಿವೆ. ಸರ್ಕಾರ ಗ್ರಾಮೀಣ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಬದಲು, ಅಧಿಕಾರಿಗಳನ್ನು ದೀರ್ಘಾವಧಿಗೆ ಪ್ರಭಾರಿಯಾಗಿ ಬೇರೆಡೆ ನಿಯೋಜಿಸಿರುವುದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತಂದಿದೆ”.

ಹೀಗಾಗಿ ಕಳೆದ ಹಲವು ವರ್ಷಗಳಿಂದ ಪ್ರಭಾರಿ ನೇಮಕಾತಿ ಯಾವ ನಿಯಮಗಳ ಅಡಿಯಲ್ಲಿ ಮುಂದುವರಿಯುತ್ತಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಕಾರ್ಯದರ್ಶಿ ಶ್ರೀಧರ್ ಸಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. 

ಸಿದ್ದಾಪುರ ಗ್ರಾಮ ಪಂಚಾಯತಿಯ ಆಡಳಿತ ವೈಫಲ್ಯ ಕುರಿತು ಸ್ಥಳೀಯ ಸಾರ್ವಜನಿಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಗ್ರಾಮ ಪಂಚಾಯತಿಗೆ ಪೂರ್ಣಾವಧಿ ಕಾರ್ಯದರ್ಶಿಯನ್ನು ನಿಯೋಜಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Post a Comment

Previous Post Next Post