ಕೊಪ್ಪಳ/ ಗಂಗಾವತಿ :
ಕಳೆದ 18 ವರ್ಷಗಳಿಂದ ಕಾನೂನಿನ ಚೌಕಟ್ಟಿನಲ್ಲಿ, ಅತ್ಯಂತ ಪಾರದರ್ಶಕವಾಗಿ ಚಾಲನಾ ತರಬೇತಿ ನೀಡುತ್ತಾ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಗಂಗಾವತಿಯ ಪ್ರತಿಷ್ಠಿತ ‘ಸಿ.ಬಿ.ಎಸ್. ಡ್ರೈವಿಂಗ್ ಶಾಲೆಯ’ (CBS Driving School) ವಿರುದ್ಧ ವ್ಯವಸ್ಥಿತ ಸಂಚು ಮುಂದುವರಿದಿದೆ. ಯಾವುದೇ ತಪ್ಪು ಮಾಡದಿದ್ದರೂ, ಕೇವಲ ದ್ವೇಷದ ರಾಜಕಾರಣ ಹಾಗೂ ದುರುದ್ದೇಶದಿಂದ ಸಂಸ್ಥೆಯನ್ನು ಮುಳುಗಿಸಲು ಹೊರಟಿರುವ ಕೆಲವರ ವಿರುದ್ಧ ಸಂಸ್ಥೆಯ ಮಾಲೀಕ ಅಶೋಕಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದಾಖಲೆಗಳ ಸಮೇತ ಕಡಕ್ ತಿರುಗೇಟು ನೀಡಿದ್ದಾರೆ.
ಹೈಕೋರ್ಟ್ ಆದೇಶವಿದ್ದರೂ ಮುಂದುವರಿದ ಕಿರುಕುಳ :
ನಮ್ಮ ಸಂಸ್ಥೆಯ ಕಾನೂನುಬದ್ಧ ಕಾರ್ಯಾಚರಣೆಯ ಪರವಾಗಿ ಸ್ವತಃ ಮಾನ್ಯ ಹೈಕೋರ್ಟ್‌ನಿಂದ ಸ್ಪಷ್ಟ ಆದೇಶ ಬಂದಿದ್ದರೂ ಸಹ, ಅದನ್ನು ಲೆಕ್ಕಿಸದೆ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಜತೆಗೆ ಕಾನೂನನ್ನು ಗೌರವಿಸಬೇಕಾದ ಅಧಿಕಾರಿಗಳೇ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಪದೇಪದೇ ನೋಟಿಸ್‌ಗಳನ್ನು ನೀಡುವುದು ನೇರವಾಗಿ ನ್ಯಾಯಾಲಯದ ಆದೇಶಕ್ಕೆ ಮಾಡುವ ಅವಮಾನ ಎಂದು ಅಶೋಕಗೌಡ ಅವರು ಕಿಡಿಕಾರಿದ್ದಾರೆ.
ಈ ಕುರಿತು ನೇರವಾಗಿ ಪ್ರಶ್ನಿಸಿರುವ ಅಶೋಕಗೌಡ, "ಜಿಲ್ಲೆಯಲ್ಲಿ ಹಲವಾರು ಡ್ರೈವಿಂಗ್ ಸ್ಕೂಲ್‌ಗಳು ಇದ್ದರೂ ಸಹ, ಸದಾ ನಿಯಮ ಪಾಲಿಸುವ ನಮ್ಮ ಶಾಲೆಯನ್ನು ಮಾತ್ರ ಯಾಕೆ ಪದೇಪದೇ ರ್ಟಾಗೇಟ್ ಮಾಡಲಾಗುತ್ತಿದೆ? ಇದರ ಹಿಂದೆ ಯಾವ ಒಳಸಂಚು ಇದೆ? ಇದಕ್ಕೆ ಈಗಿನ ಮತ್ತು ಹಿಂದಿನ ಅಧಿಕಾರಿಗಳು ಕಡ್ಡಾಯವಾಗಿ ಉತ್ತರಿಸಲೇಬೇಕು" ಎಂದು ಆಗ್ರಹಿಸಿದ್ದಾರೆ.
ದಾಖಲೆಗಳೇ ನಮ್ಮ ಶ್ರೀರಕ್ಷೆ — ಸುಳ್ಳು ಆರೋಪಗಳಿಗೆ ಜಾಗವಿಲ್ಲ :
ಸಂಸ್ಥೆಯ ವಿರುದ್ಧ ಕೇಳಿಬರುತ್ತಿರುವ ವಂಚನೆ ಸೇರಿದಂತೆ ಎಲ್ಲಾ ಆರೋಪಗಳು ಹಸಿ ಸುಳ್ಳು ಎಂದಿರುವ ಅವರು, ಆರ್‌ಸಿ (RC), ಫಿಟ್ನೆಸ್ ಪ್ರಮಾಣಪತ್ರ, ವಿಮೆ ಸೇರಿದಂತೆ ವಾಹನ ಹಾಗೂ ಸಂಸ್ಥೆಗೆ ಸಂಬಂಧಿಸಿದ ಪ್ರತಿಯೊಂದು ಕಾನೂನುಬದ್ಧ ದಾಖಲೆಯೂ ತಮ್ಮ ಬಳಿ ಭದ್ರವಾಗಿವೆ ಎಂದಿದ್ದಾರೆ.
"ಸ್ವಾರ್ಥ ರಾಜಕಾರಣಿಗಳ ಬೆಂಬಲ ಹಾಗೂ ಅಧಿಕಾರಿಗಳ ಒಳಸಂಚು" :
ಆರ್‌ಟಿಒ ಇಲಾಖೆಯ ಕೆಲವು ನಿವೃತ್ತ, ವರ್ಗಾವಣೆಗೊಂಡ ಹಾಗೂ ಹಾಲಿ ಅಧಿಕಾರಿಗಳ ಒಳಸಂಚು ಮತ್ತು ವೈಯಕ್ತಿಕ ಹಿತಾಸಕ್ತಿಯೇ ಸಿ.ಬಿ.ಎಸ್. ಸಂಸ್ಥೆಯನ್ನು ಟಾರ್ಗೆಟ್ ಮಾಡಲು ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
"ಮಾನ್ಯ ಲೋಕಾಯುಕ್ತರಿಗೆ ದೂರು ಹಾಗೂ ‘ನ್ಯಾಯಾಂಗ ನಿಂದನೆ’ ಎಚ್ಚರಿಕೆ" :
ಸಂಸ್ಥೆಗೆ ವ್ಯವಸ್ಥಿತವಾಗಿ ಅನ್ಯಾಯ ಎಸಗುತ್ತಿರುವವರ ವಿರುದ್ಧ ಕಾನೂನು ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಅವರು, ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ತೊಂದರೆ ನೀಡುತ್ತಿರುವ ಅಧಿಕಾರಿಗಳು, ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಸ್ವಾರ್ಥ ರಾಜಕಾರಣಿಗಳ ವಿರುದ್ಧ ‘ನ್ಯಾಯಾಂಗ ನಿಂದನೆ’ (Contempt of Court) ಹಾಗೂ ‘ಮಾನನಷ್ಟ ಮೊಕದ್ದಮೆ’ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರೊಂದಿಗೆ, "ನಮ್ಮ ಹಾಗೂ ನಮ್ಮ ಸಂಸ್ಥೆಯ ವಿರುದ್ಧ ನಿರಂತರವಾಗಿ ಅನ್ಯಾಯ ಮಾಡುತ್ತಿರುವ ನಿವೃತ್ತ, ವರ್ಗಾವಣೆಗೊಂಡ ಹಾಗೂ ಹಾಲಿ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ಕೋರಿ ಶೀಘ್ರದಲ್ಲೇ "ಮಾನ್ಯ ಲೋಕಾಯುಕ್ತರಿಗೆ ಅಧಿಕೃತ ದೂರು ಸಲ್ಲಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಲಾಖೆಯ ಹಿಂದಿನ-ಈಗಿನ ಮತ್ತು ನಿವೃತ್ತ ಅಧಿಕಾರಿಗಳ ಕೈವಾಡದ ಬಗ್ಗೆ ರಾಜ್ಯ ಮಟ್ಟದ ಉನ್ನತಾಧಿಕಾರಿಗಳು ನಿಷ್ಪಕ್ಷಪಾತ ಹಾಗೂ ಕಡಕ್ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
"ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ" :
ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಶೋಕಗೌಡ ಒತ್ತಾಯಿಸಿದ್ದಾರೆ.
ಕಳೆದ 18 ವರ್ಷಗಳ ಪ್ರಾಮಾಣಿಕ ಸೇವೆಗೆ ಮಸಿ ಬಳೆಯಲು ಹೊರಟಿರುವ ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಾನೂನಿನ ಮೂಲಕವೇ ತಕ್ಕ ಉತ್ತರ ನೀಡುವುದಾಗಿ ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



