"ಐತಿಹಾಸಿಕ ದಿನವನ್ನೇ ಮರೆತ ಅಧಿಕಾರಿಗಳು...! ಕ್ರಮಕ್ಕೆ ಆಗ್ರಹ, ಇಲ್ಲವಾದಲ್ಲಿ ಪ್ರತಿಭಟನೆಯ ಎಚ್ಚರಿಕೆ".
ಕಾರಟಗಿ/ಸಿದ್ದಾಪುರ : ಹೈದರಾಬಾದ್ ನಿಜಾಮನ ಆಡಳಿತದಿಂದ ಕಲ್ಯಾಣ ಕರ್ನಾಟಕದ ಜನತೆ ಮುಕ್ತಿ ಪಡೆದು ಭಾರತೀಯ ಒಕ್ಕೂಟದೊಂದಿಗೆ ಒಂದಾದ ಐತಿಹಾಸಿಕ ದಿನವಾದ *ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ*ಯನ್ನು ಕಲ್ಯಾಣ ಕರ್ನಾಟಕದಾದ್ಯಂತ ವಿವಿಧೆಡೆ ಗೌರವಪೂರ್ವಕವಾಗಿ ಆಚರಿಸಲಾಗುತ್ತಿರುವ ಸಂದರ್ಭದಲ್ಲಿ, *ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ನಾಡ ಕಚೇರಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಆರ್ಜಿಬಿ) ಶಾಖೆಯಲ್ಲಿ ಯಾವುದೇ ವಿಶೇಷ ಆಚರಣೆ ಅಥವಾ ಧ್ವಜಾರೋಹಣ ನಡೆಯದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.*
ಐತಿಹಾಸಿಕ ದಿನಕ್ಕೆ ಸರ್ಕಾರಿ ಕಚೇರಿಯಲ್ಲೇ ಮೌನ! :
ಕಲ್ಯಾಣ ಕರ್ನಾಟಕದ ಇತಿಹಾಸ, ಹೋರಾಟ, ತ್ಯಾಗ ಮತ್ತು ವಿಮೋಚನೆಯೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಸೆಪ್ಟೆಂಬರ್ 17ರಂದು ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳು ದಿನದ ಮಹತ್ವವನ್ನು ಸ್ಮರಿಸುವುದು ಜನರ ನಿರೀಕ್ಷೆಯಾಗಿದೆ.
ಆದರೆ ಸಿದ್ದಾಪುರದ *ನಾಡ ಕಚೇರಿಯ ಆವರಣದಲ್ಲಿ ದಿನಾಚರಣೆಯ ಯಾವುದೇ ಗೋಚರ ಕಾರ್ಯಕ್ರಮ ನಡೆಯದಿರುವುದು*, ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
*ಜನಸಾಮಾನ್ಯರಿಗೆ ಆಡಳಿತದ ಮಹತ್ವವನ್ನು ತಿಳಿಸಬೇಕಾದ ಕಚೇರಿಯಲ್ಲೇ ಇಂತಹ ಐತಿಹಾಸಿಕ ದಿನ ಮೌನವಾಗಿ ಕಳೆಯಬೇಕೇ?* ಎಂಬ ಪ್ರಶ್ನೆಯನ್ನು ಸ್ಥಳೀಯರು ಮುಂದಿಟ್ಟಿದ್ದಾರೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿದ್ದಾಪುರ ಶಾಖೆಯಲ್ಲಿ ಯೂ ಆಚರಣೆ ಇಲ್ಲ :
ಇದೇ ರೀತಿಯಲ್ಲಿ ಸಿದ್ದಾಪುರದ *ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಯಾವುದೇ ಕಾರ್ಯಕ್ರಮ ಕಂಡುಬರದಿರುವುದು* ಸಾರ್ವಜನಿಕರ ಗಮನ ಸೆಳೆದಿದೆ.
ಸರ್ಕಾರಿ ಸೇವೆ ಹಾಗೂ ಸಾರ್ವಜನಿಕ ಸೇವೆಯೊಂದಿಗೆ ನೇರ ಸಂಪರ್ಕ ಹೊಂದಿರುವ ಸಂಸ್ಥೆಗಳು ನಾಡಿನ ಇತಿಹಾಸದ ಮಹತ್ವದ ದಿನಗಳನ್ನು ಸ್ಮರಿಸುವಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
“ನಾಡಿನ ಇತಿಹಾಸಕ್ಕೆ ಗೌರವ ಕೊಡದ ಉಪತಹಶೀಲ್ದಾರ್ ಮತ್ತು ಬ್ಯಾಂಕ್ ಸಿಬ್ಬಂದಿ...?” :
“ಸ್ವಾತಂತ್ರ್ಯ, ವಿಮೋಚನೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ಹಿರಿಯರ ತ್ಯಾಗವನ್ನು ಸ್ಮರಿಸುವ ದಿನದಂದು ಕನಿಷ್ಠ ಧ್ವಜಾರೋಹಣವೂ ನಡೆಸದಿರುವುದು ಬೇಸರದ ಸಂಗತಿ. ನಾಡಿನ ಇತಿಹಾಸಕ್ಕೆ ಗೌರವ ಕೊಡಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲದ ಸಿದ್ದಾಪುರ ನಾಡ ಕಛೇರಿಯ ಉಪತಹಶೀಲ್ದಾರ್ ಮತ್ತು ಬ್ಯಾಂಕ್ ಸಿಬ್ಬಂದಿಯ ನಡೆಗೆಗೆ ಇದನ್ನು ಗಮನಿಸದ ಮತ್ತು ಪ್ರಶ್ನೆ ಮಾಡದ ಜಿಲ್ಲಾಧಿಕಾರಿ ಹಾಗೂ ಕಾರಟಗಿ ತಹಶಿಲ್ದಾರರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲೇ ಇತಿಹಾಸದ ದಿನ ಮರೆತುಹೋದರೆ ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಹೇಗೆ ಮೂಡುತ್ತದೆ?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ, ಜಿಲ್ಲಾಡಳಿತ ಕೂಡಲೇ ಗಮನಹರಿಸಲಿ :
ಸಿದ್ದಾಪುರ ನಾಡ ಕಚೇರಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಸಿದ್ದಾಪುರ ಶಾಖೆಯಲ್ಲಿ ಸೆಪ್ಟೆಂಬರ್ 17ರಂದು ಯಾವುದೇ ಕಾರ್ಯಕ್ರಮ ಏಕೆ ನಡೆಯಲಿಲ್ಲ?
ಸರ್ಕಾರದಿಂದ ಈ ದಿನಾಚರಣೆಗೆ ಸಂಬಂಧಿಸಿದಂತೆ ಆದೇಶ, ಸುತ್ತೋಲೆ ಅಥವಾ ನಿರ್ದೇಶನ ಬಂದಿದ್ದರೂ ಸಹ ಅದನ್ನು ಪಾಲಿಸಲಾಗಿಲ್ಲ, ಯಾಕೆ..?
ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿಗಳು, ಕಾರಟಗಿ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಪರಿಶೀಲಿಸಿ, ಸಿದ್ದಾಪುರ ನಾಡ ಕಚೇರಿ ಹಾಗೂ ಬ್ಯಾಂಕ್ ಶಾಖೆಯಲ್ಲಿ ಕಾರ್ಯಕ್ರಮ ಏಕೆ ನಡೆಯಲಿಲ್ಲ ಎಂಬುದರ ಬಗ್ಗೆ ಕಾರಣ ಕೇಳಿ ನೋಟಿಸ್ ಹೊರಡಿಸಬೇಕು. ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
“ಮುಂದೆ ಇಂತಹ ನಿರ್ಲಕ್ಷ್ಯ ಮರುಕಳಿಸಬಾರದು” :
ಐತಿಹಾಸಿಕ ದಿನಗಳ ಆಚರಣೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗದೆ, ಆ ದಿನದ ಇತಿಹಾಸ, ಹೋರಾಟ ಮತ್ತು ತ್ಯಾಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಿರಬೇಕು. ಮುಂದಿನ ದಿನಗಳಲ್ಲಿ ಇಂತಹ ಪ್ರಮುಖ ದಿನಾಚರಣೆಗಳಲ್ಲಿ ಯಾವುದೇ ಸಂಸ್ಥೆ ನಿರ್ಲಕ್ಷ್ಯ ವಹಿಸದಂತೆ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
*ಒಟ್ಟಿನಲ್ಲಿ, ಕಲ್ಯಾಣ ಕರ್ನಾಟಕದ ವಿಮೋಚನೆಯಂತಹ ಐತಿಹಾಸಿಕ ದಿನದಂದು ಸಿದ್ದಾಪುರದ ಪ್ರಮುಖ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಕಂಡುಬಂದಿರುವ ಈ ಮೌನ ಇದೀಗ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮೇಲಧಿಕಾರಿಗಳ ಸ್ಪಷ್ಟನೆ ಮತ್ತು ಕ್ರಮದತ್ತ ಎಲ್ಲರ ಗಮನ ನೆಟ್ಟಿದೆ.*


