Kalyanarajya

"ಉಪಾಧ್ಯಕ್ಷರ ಹಾಗೂ ಸದಸ್ಯರ ಆರೋಪಗಳು ಸಂಪೂರ್ಣ ಸುಳ್ಳು, ರಾಜಕೀಯ ಪ್ರೇರಿತ" – ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ ಹಾಗೂ PDO ಜ್ಯೋತಿ ರೆಡ್ಡಿ ಸ್ಪಷ್ಟನೆ".

ಕೊಪ್ಪಳ, ಜುಲೈ 03:   ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರು ಮಾಡಿರುವ ಆರೋಪಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಜ್ಯೋತಿ ರೆಡ್ಡಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 


ಸಂಯುಕ್ತವಾಗಿ ನೀಡಿರುವ ಸ್ಪಷ್ಟೀಕರಣದಲ್ಲಿ, "ನಮ್ಮ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳು ಆಧಾರರಹಿತ, ಸತ್ಯಕ್ಕೆ ದೂರವಾದ ಹಾಗೂ ರಾಜಕೀಯ ಪ್ರೇರಿತವಾಗಿವೆ. ಗ್ರಾಮ ಪಂಚಾಯತಿ ಆಡಳಿತವು ಸಂಪೂರ್ಣವಾಗಿ "ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993 ಹಾಗೂ ಸರ್ಕಾರದ ನಿಯಮಗಳು, ಮಾರ್ಗಸೂಚಿಗಳು ಮತ್ತು ಹಣಕಾಸು ನಿಯಮಾವಳಿಗಳ ಅನುಸಾರವೇ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳು, ಅನುದಾನ ಹಂಚಿಕೆ ಹಾಗೂ ಸಾಮಾನ್ಯ ಸಭೆಗಳ ಕರೆಯುವಿಕೆ ಸೇರಿದಂತೆ ಎಲ್ಲಾ ಆಡಳಿತಾತ್ಮಕ ಕ್ರಮಗಳನ್ನು ಕಾನೂನುಬದ್ಧವಾಗಿ ಕೈಗೊಳ್ಳಲಾಗುತ್ತಿದ್ದು, ಯಾವುದೇ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. 


15ನೇ ಹಣಕಾಸು ಯೋಜನೆ ಅನುದಾನದ ಕುರಿತು ಮಾಡಲಾಗಿರುವ ದುರುಪಯೋಗದ ಆರೋಪಗಳನ್ನೂ ಅವರು ನಿರಾಕರಿಸಿದ್ದು, "ಯಾವುದೇ ಕಾಮಗಾರಿಯನ್ನು ನಿಯಮಬಾಹಿರವಾಗಿ ಅನುಮೋದಿಸಲಾಗಿಲ್ಲ. ಎಲ್ಲಾ ಕಾಮಗಾರಿಗಳು ಸರ್ಕಾರದ ಮಾರ್ಗಸೂಚಿಗಳು, ತಾಂತ್ರಿಕ ಅನುಮೋದನೆ ಹಾಗೂ ಗ್ರಾಮ ಪಂಚಾಯತಿ ಸಭೆಯ ನಿರ್ಣಯಗಳ ಆಧಾರದ ಮೇಲೆಯೇ ಕೈಗೊಳ್ಳಲಾಗುತ್ತಿವೆ. ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಗೂ ಲೆಕ್ಕಪತ್ರ ಮತ್ತು ದಾಖಲೆಗಳಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ, ಪಂಚಾಯತಿ ಅಭಿವೃದ್ಧಿಗೆ ಸಹಕಾರ ನೀಡುವಂತೆ ಉಪಾಧ್ಯಕ್ಷರು ಎಲ್ಲ ಸದಸ್ಯರಿಗೂ ಹಲವು ಬಾರಿ ಮನವಿ ಮಾಡಲಾಗಿದೆ. ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗುವುದು ಅಭಿವೃದ್ಧಿ ಕಾರ್ಯಗಳಿಗೆ ವಿಳಂಬ ಉಂಟುಮಾಡುತ್ತದೆ ಎಂದು ಅಧ್ಯಕ್ಷೆ ಹಾಗೂ PDO ಅವರು ತಿಳಿಸಿದ್ದಾರೆ. 


"ಗ್ರಾಮದ ಅಭಿವೃದ್ಧಿಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಕೆಲವರು ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪಂಚಾಯತಿಯ ಪ್ರತಿಷ್ಠೆಗೆ ಧಕ್ಕೆ ತರುವ ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸುಳ್ಳು ಆರೋಪಗಳನ್ನು ನಾವು ಕಾನೂನುಬದ್ಧವಾಗಿ ಎದುರಿಸುತ್ತೇವೆ. ಅಗತ್ಯವಿದ್ದರೆ ಮಾನಹಾನಿ ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕೆಲಸಸಲಾಗುವುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, "ಪಂಚಾಯತಿಯ ಎಲ್ಲಾ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರಗಳು ಸಂಬಂಧಪಟ್ಟ ಇಲಾಖೆಗಳ ಮೇಲ್ವಿಚಾರಣೆಯಲ್ಲಿದ್ದು, ಯಾವುದೇ ತನಿಖೆ ಅಥವಾ ಲೆಕ್ಕಪರಿಶೋಧನೆಗೆ ನಾವು ಸಂಪೂರ್ಣ ಸಹಕಾರ ನೀಡಲು ಸಿದ್ಧರಾಗಿದ್ದೇವೆ". ತಪ್ಪು ಮಾಹಿತಿಯ ಹಾಗೂ ಅಪಪ್ರಚಾರಗಳ ಬದಲಾಗಿ ಅಧಿಕೃತ ದಾಖಲೆಗಳನ್ನು ನಂಬುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇವೆ" ಎಂದು ಹಾಗೂ "ಮುಂಬರುವ ಸಾಮನ್ಯ ಸಭೆಗೆ ಎಲ್ಲಾ  ಸದಸ್ಯರು ಹಾಜರಾಗಿ, ಗ್ರಾಮದ ಅಭಿವೃದ್ಧಿಗೆ ಕೈ ಜೊಡಿಸಬೇಕೆಂದು ಎಂದು ಅಧ್ಯಕ್ಷೆ ಶಿವಗಂಗಾ ಪಂಪಾಪತಿ ಭೋವಿ ಹಾಗೂ PDO ಜ್ಯೋತಿ ರೆಡ್ಡಿ ಅವರು ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.




Post a Comment

Previous Post Next Post