* ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ.
* ಸತತವಾಗಿ ಕೋರಂ ಕೊರತೆಯಿಂದ ಸಾಮಾನ್ಯ ಸಭೆಗಳು ರದ್ದು.
* ಜವಾಬ್ದಾರಿಯಿಲ್ಲದ ಸದಸ್ಯರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ.
* ಜೂನ್ 30ಕ್ಕೆ ಮತ್ತೆ ಸಭೆ; ಈ ಬಾರಿಯಾದರೂ ಸದಸ್ಯರು ಸಭೆಗೆ ಹಾಜರಾಗುತ್ತಾರೆಯೇ..? ಸಾರ್ವಜನಿಕರ ಪ್ರಶ್ನೆ.
ಕೊಪ್ಪಳ/ಕಾರಟಗಿ: ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಕಂಡು ಗ್ರಾಮಾಭಿವೃದ್ಧಿಯ ದಿಕ್ಕು ನಿರ್ಧರಿಸಬೇಕಾದ **ಸಿದ್ದಾಪುರ ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆ ಸತತವಾಗಿ ಕೋರಂ ಪೂರ್ಣಗೊಳ್ಳದೇ ರದ್ದಾಗಿರುವುದು** ಪಂಚಾಯತಿ ಆಡಳಿತದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ. ಪದೇ ಪದೇ ಇದೇ ಘಟನೆ ಮರುಕಳಿಸುತ್ತಿರುವುದು ಜನಪ್ರತಿನಿಧಿಗಳ ಕರ್ತವ್ಯಲೋಪ ಹಾಗೂ ಆಡಳಿತದ ನಿರ್ಲಕ್ಷ್ಯವನ್ನು ಬಯಲಿಗೆಳೆಯುತ್ತಿದೆ. ಸದಸ್ಯರ ಈ ನೆಡೆ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಹಾರ ಕಂಡು ಹಿಡಿಯ ಬೇಕಾದ ವೇದಿಕೆಯೇ ಸದಸ್ಯರ ನಿರ್ಲಕ್ಷ್ಯದಿಂದ ಪದೇ ಪದೇ ವಿಫಲವಾಗುತ್ತಿರುವುದು ಪಂಚಾಯತಿ ಆಡಳಿತದ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗ್ರಾಮದ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ, ಸ್ವಚ್ಛತೆ, ನಿವೇಶನ, ವಸತಿ ಯೋಜನೆ, ಅಭಿವೃದ್ಧಿ ಕಾಮಗಾರಿಗಳು, ಸರ್ಕಾರಿ ಅನುದಾನಗಳ ಬಳಕೆ, ವಿಶೇಷವಾಗಿ ಈ-ಸ್ವತ್ತು, ಸಾರ್ವಜನಿಕ ರಸ್ತೆ ಒತ್ತುವರಿ, ಸರಕಾರಿ ಜಾಗ ಒತ್ತುವರಿ ಸೇರಿದಂತೆ ಜನರ ಬದುಕಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಬೇಕಾದ ಸಾಮಾನ್ಯ ಸಭೆಗೆ ಸದಸ್ಯರು ಗೈರಾಗಿರುವ ಕಾರಣದಿಂದಾಗಿ ಸಭೆ ರದ್ದಾಗುತ್ತಿರುವುದು *ಜನಪ್ರತಿನಿಧಿಗಳ ಕರ್ತವ್ಯ ಲೋಪಕ್ಕೆ ಸ್ಫಷ್ಟ ಉದಾಹರಣೆ ಆಗಿದ್ದಲ್ಲದೇ, ಇದು ಸಿದ್ದಾಪುರ ಗ್ರಾಮಸ್ಥರಿಗೆ ಆಗುತ್ತಿರುವ ಅನ್ಯಾಯ* ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಸತತವಾಗಿ ಈ ಹಿಂದಿನ ಎರೆಡು ಸಾಮಾನ್ಯ ಸಭೆಗಳಿಗೂ ಸದಸ್ಯರು ಸಮರ್ಪಕವಾಗಿ ಹಾಜರಾಗದೇ, ಕೋರಂ ಪೂರ್ಣಗೊಳ್ಳದ ಪರಿಣಾಮ ಎರೆಡೂ ಸಭೆಗಳು ರದ್ದಾಗಿದ್ದವು. ಇದೀಗ ಮತ್ತೊಮ್ಮೆ ಜೂನ್ 30ರಂದು ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ಆದರೆ ಈ ಬಾರಿಯಾದರೂ ಎಲ್ಲಾ ಸದಸ್ಯರು ಜವಾಬ್ದಾರಿಯಿಂದ ಸಭೆಗೆ ಹಾಜರಾಗುತ್ತಾರೆಯೇ ಅಥವಾ ಮತ್ತೊಮ್ಮೆ ಕೋರಂ ಕೊರತೆಯಿಂದ ಸಭೆ ರದ್ದಾಗುತ್ತದೆಯೇ ಎಂಬುದನ್ನು ಗ್ರಾಮಸ್ಥರು ಕಾತರದಿಂದ ಗಮನಿಸುತ್ತಿದ್ದಾರೆ.*
**ಜನರ ಮತ ಪಡೆದು ಅಧಿಕಾರಕ್ಕೆ ಬಂದ ಸದಸ್ಯರಿಗೆ ಸಭೆಗೆ ಹಾಜರಾಗಲು ಸಮಯವಿಲ್ಲದಿದ್ದರೆ, ಅವರು ಜನಪ್ರತಿನಿಧಿಗಳಾಗಿ ಮುಂದುವರಿಯುವ ನೈತಿಕ ಹಕ್ಕು ಇದೆಯೇ?** ಎಂಬ ಪ್ರಶ್ನೆ ಈಗ ಗ್ರಾಮದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಪದೇ ಪದೇ ಸಭೆ ನಡೆಯದೇ ಇರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಸಾರ್ವಜನಿಕರ ಅರ್ಜಿಗಳು, ಯೋಜನೆಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳು ಕಡತಗಳಲ್ಲೇ ಉಳಿಯುತ್ತಿವೆ. ಇದರಿಂದ ಗ್ರಾಮದ ಅಭಿವೃದ್ಧಿಯೇ ಸಂಪೂರ್ಣವಾಗಿ ಸ್ಥಗಿತಗೊಂಡಂತಾಗಿದೆ.
ಸಾರ್ವಜನಿಕರು ಆರೋಪಿಸುವಂತೆ, ಕೆಲ ಸದಸ್ಯರು ವೈಯಕ್ತಿಕ ರಾಜಕೀಯ ದ್ವೇಷ, ಗುಂಪುಗಾರಿಕೆ ಹಾಗೂ ಸ್ವಾರ್ಥದ ಕಾರಣದಿಂದ ಉದ್ದೇಶಪೂರ್ವಕವಾಗಿ ಸಭೆಗೆ ಗೈರಾಗುತ್ತಿರುವುದು, ಅದರ ನೇರ ಹೊರೆ ಗ್ರಾಮಸ್ಥರ ಮೇಲೆ ಬೀಳುತ್ತಿದೆ. ಇದು ಕೇವಲ ಸಭೆ ರದ್ದಾಗಿರುವ ವಿಷಯವಲ್ಲ, **ಗ್ರಾಮದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಮಾನಿಸುವ ಬೆಳವಣಿಗೆ** ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
**ಸಭೆಗೆ ನಿರಂತರವಾಗಿ ಗೈರಾಗುವ ಸದಸ್ಯರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಕಠಿಣ ಶಿಸ್ತು ಕ್ರಮ ಜರುಗಿಸಬೇಕು.** ಅಗತ್ಯವಿದ್ದರೆ ನೋಟಿಸ್ ಜಾರಿ ಮಾಡಿ, ಸದಸ್ಯತ್ವ ರದ್ದುಪಡಿಸುವ ಪ್ರಕ್ರಿಯೆಗೂ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಸಭೆಗಳನ್ನು ಸರಿಯಾಗಿ ನಡೆಸುವ ಹೊಣೆಗಾರಿಕೆ ಹೊಂದಿರುವ ಪಂಚಾಯತಿ ಆಡಳಿತ ಹಾಗೂ ಮೇಲಾಧಿಕಾರಿಗಳ ಪಾತ್ರದ ಮೇಲೂ ಪ್ರಶ್ನೆಗಳು ಎದ್ದಿವೆ. **ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು** ಈ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತನಿಖೆ ನಡೆಸಬೇಕು. ಸಭೆಗಳು ಏಕೆ ಪದೇ ಪದೇ ರದ್ದಾಗುತ್ತಿವೆ? ಯಾರು ಹೊಣೆ? ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಎಂಬುದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
**"ಜನರ ತೆರಿಗೆ ಹಣದಿಂದ ವೇತನ, ಭತ್ಯೆ ಹಾಗೂ ಸೌಲಭ್ಯಗಳನ್ನು ಪಡೆಯುವ ಸದಸ್ಯರು ತಮ್ಮ ಮೂಲ ಕರ್ತವ್ಯವಾದ ಸಭೆಗೆ ಹಾಜರಾಗದೇ ಇದ್ದರೆ, ಅದು ಸಾರ್ವಜನಿಕರ ನಂಬಿಕೆಗೆ ಮಾಡಿದ ದ್ರೋಹವಲ್ಲವೇ?"** ಎಂಬ ಪ್ರಶ್ನೆ ಗ್ರಾಮದಲ್ಲಿ ಪ್ರತಿಧ್ವನಿಸುತ್ತಿದೆ.
**ಈಗ ಎಲ್ಲರ ದೃಷ್ಟಿಯೂ ಜೂನ್ 30ರಂದು ನಡೆಯಲಿರುವ ಸಾಮಾನ್ಯ ಸಭೆಯತ್ತ ನೆಟ್ಟಿದೆ.** ಈ ಬಾರಿಯಾದರೂ ಸದಸ್ಯರು ತಮ್ಮ ಜವಾಬ್ದಾರಿಯನ್ನು ಅರಿತು ಪೂರ್ಣ ಸಂಖ್ಯೆಯಲ್ಲಿ ಹಾಜರಾಗಿ ಗ್ರಾಮದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಾರೆಯೇ, ಅಥವಾ ಮತ್ತೊಮ್ಮೆ ಸಭೆ ರದ್ದಾಗಿ ಗ್ರಾಮಸ್ಥರ ನಿರೀಕ್ಷೆ ಹುಸಿಯಾಗುತ್ತದೆಯೇ ಎಂಬುದು ಕಾದು ನೋಡಬೇಕಾದ ಸಂಗತಿಯಾಗಿದೆ.
**ಸದಸ್ಯರು ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳದೇ, ಅದೇ ನಿರ್ಲಕ್ಷ್ಯ ತೋರಿದರೆ, ನಿರ್ಲಕ್ಷ್ಯ ತೋರಿದ ಸದಸ್ಯರ ವಿರುದ್ಧ ಕಾನೂನು ಹೋರಾಟ, ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ** ಎಂಬ ಎಚ್ಚರಿಕೆಯೂ ಕೇಳಿಬಂದಿದೆ.
**"ಗ್ರಾಮದ ಅಭಿವೃದ್ಧಿಯನ್ನು ಅಡ್ಡಿಪಡಿಸುವವರಿಗೆ ಅಧಿಕಾರದಲ್ಲಿರುವ ನೈತಿಕ ಹಕ್ಕಿಲ್ಲ; ಕಾನೂನು ಕ್ರಮವೇ ಅಂತಿಮ ಉತ್ತರ"** ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



