Kalyanarajya

ಸಿದ್ದಾಪುರ ಗ್ರಾ.ಪಂ.ನಲ್ಲಿ ಸಿ.ಸಿ. ಕ್ಯಾಮರಾಗಳು ಬಂದ್ ಯಾಕೆ..? ಸಾರ್ವಜನಿಕರಲ್ಲಿ ಅನುಮಾನಗಳ ಸುರಿಮಳೆ..!

ಸಿದ್ದಾಪುರ (ಕೊಪ್ಪಳ): ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಉದ್ದೇಶದಿಂದ ಅಳವಡಿಸಲಾಗುವ ಸಿ.ಸಿ. ಕ್ಯಾಮರಾಗಳೇ ಕೆಲಸ ಮಾಡದಿದ್ದರೆ ಅದರ ಹಿಂದಿನ ಕಾರಣವೇನು? ಎಂಬ ಪ್ರಶ್ನೆ ಇದೀಗ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರನ್ನು ಕಾಡುತ್ತಿದೆ.  

ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಳವಡಿಸಲಾಗಿರುವ ಸಿ.ಸಿ. ಕ್ಯಾಮರಾಗಳು ಬಹುಕಾಲದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಇದರಿಂದ ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ವೆಚ್ಚ ಮಾಡಿ ಅಳವಡಿಸಿದ ಕ್ಯಾಮರಾಗಳು ನಿರ್ವಹಣೆಯ ಕೊರತೆಯಿಂದ ನಿಷ್ಕ್ರಿಯವಾಗಿವೆಯೇ? ಅಥವಾ ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿದೆಯೇ? ಎಂಬ ಪ್ರಶ್ನೆಗಳು ಈಗ ಚರ್ಚೆಗೆ ಗ್ರಾಸವಾಗಿವೆ.

ಗ್ರಾಮ ಪಂಚಾಯತಿ ಕಚೇರಿಯು ಸಾರ್ವಜನಿಕರ ಸೇವೆಗೆ ಮೀಸಲಾಗಿರುವ ಸರ್ಕಾರಿ ಸಂಸ್ಥೆಯಾಗಿದ್ದು, ಇಲ್ಲಿ ನಡೆಯುವ ಪ್ರತಿಯೊಂದು ಆಡಳಿತಾತ್ಮಕ ಚಟುವಟಿಕೆಯೂ ಪಾರದರ್ಶಕವಾಗಿರಬೇಕಾಗಿದೆ. ಆದರೆ ಕಚೇರಿಯಲ್ಲಿನ ಸಿ.ಸಿ. ಕ್ಯಾಮರಾಗಳು ಕಾರ್ಯನಿರ್ವಹಿಸದಿರುವುದು ಪಾರದರ್ಶಕ ಆಡಳಿತದ ಮೇಲೆಯೇ ಅನುಮಾನ ಮೂಡಿಸಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಂಚಾಯತಿಯಲ್ಲಿ ಆಡಳಿತ ವೈಫಲ್ಯ, ಸಾರ್ವಜನಿಕರೊಂದಿಗೆ ಅಸಮರ್ಪಕ ವರ್ತನೆ, ಕಚೇರಿ ಸಂಪನ್ಮೂಲಗಳ ದುರುಪಯೋಗ ಹಾಗೂ ವಿವಿಧ ವಿವಾದಗಳು ಬೆಳಕಿಗೆ ಬರುತ್ತಿರುವ ಸಂದರ್ಭದಲ್ಲಿ ಕ್ಯಾಮರಾಗಳು ನಿಷ್ಕ್ರಿಯವಾಗಿರುವುದು ಅನುಮಾನಗಳಿಗೆ ಮತ್ತಷ್ಟು ಬಲ ನೀಡಿದೆ.

"ಸಿ.ಸಿ. ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಕಚೇರಿಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯ ದಾಖಲೆ ಲಭ್ಯವಾಗುತ್ತಿತ್ತು. ಆದರೆ ಕ್ಯಾಮರಾಗಳು ಬಂದ್ ಆಗಿರುವುದರಿಂದ ಏನನ್ನು ಮರೆಮಾಚಲಾಗುತ್ತಿದೆ?" ಎಂದು ಕೆಲ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇನ್ನೂ ಕೆಲ ಗ್ರಾಮಸ್ಥರು, "ಸಾಮಾನ್ಯ ನಾಗರಿಕರ ಮನೆಗಳಲ್ಲಿ ಅಳವಡಿಸಿದ ಕ್ಯಾಮರಾಗಳನ್ನೇ ನಿರಂತರವಾಗಿ ನಿರ್ವಹಣೆ ಮಾಡಲಾಗುತ್ತದೆ. ಆದರೆ ಸರ್ಕಾರಿ ಕಚೇರಿಯಲ್ಲಿನ ಕ್ಯಾಮರಾಗಳು ತಿಂಗಳುಗಟ್ಟಲೆ ಕೆಟ್ಟುಕೊಂಡಿದ್ದರೂ ಸರಿಪಡಿಸದಿರುವುದು ನಿರ್ಲಕ್ಷ್ಯವೋ ಅಥವಾ ಉದ್ದೇಶಪೂರ್ವಕ ಕ್ರಮವೋ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿ.ಸಿ. ಕ್ಯಾಮರಾಗಳ ಅಳವಡಿಕೆಗೆ ವೆಚ್ಚವಾದ ಹಣ ಎಷ್ಟು? ಅವು ಕೊನೆಯದಾಗಿ ಯಾವಾಗ ಕಾರ್ಯನಿರ್ವಹಿಸಿದ್ದವು? ನಿರ್ವಹಣೆಯ ಜವಾಬ್ದಾರಿ ಯಾರದು? ದುರಸ್ತಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ಪಷ್ಟ ಉತ್ತರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

               # ಈ ಕುರಿತು ಜನರ ಪ್ರಶ್ನೇಗಳು.....

* ಸಿ.ಸಿ. ಕ್ಯಾಮರಾಗಳು ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿಲ್ಲ?

* ದುರಸ್ತಿ ಮಾಡಿಸದೇ ಇರುವುದಕ್ಕೆ ಕಾರಣವೇನು? ಅಥವಾ

* ಸಿ.ಸಿ ಕ್ಯಾಮರಾಗಳನ್ನು ಉದ್ದೇಶ ಪೂರ್ವಕವಾಗಿಯೇ ಬಂದ್ ಮಾಡಲಾಗಿದೆಯೇ...? ಒಂದು ವೇಳೆ ಉದ್ದೇಶ ಪೂರ್ವಕವಾಗಿ ಬಂದ್ ಮಾಡೀದ್ದರೆ, ಅದಕ್ಕೆ ಕಾರಣಗಳೇನು....?

* ಸಾರ್ವಜನಿಕ ಹಣದಲ್ಲಿ ಅಳವಡಿಸಿದ ಉಪಕರಣಗಳ ನಿರ್ವಹಣೆ ಯಾಕೆ ಆಗುತ್ತಿಲ್ಲ? 

* ಕ್ಯಾಮರಾಗಳು ಬಂದ್ ಆಗಿರುವ ಅವಧಿಯಲ್ಲಿ ಕಚೇರಿಯಲ್ಲಿ ನಡೆದ ಚಟುವಟಿಕೆಗಳ ಮೇಲ್ವಿಚಾರಣೆ ಹೇಗೆ ನಡೆಯುತ್ತಿದೆ? 

* ಇದಕ್ಕೆ ಹೊಣೆಗಾರರು ಯಾರು?

ಸರ್ಕಾರಿ ಕಚೇರಿಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಸಿ.ಸಿ. ಕ್ಯಾಮರಾಗಳೇ ಕತ್ತಲೆಯಲ್ಲಿರುವುದು ಸಿದ್ದಾಪುರ ಗ್ರಾಮ ಪಂಚಾಯತಿಯ ಆಡಳಿತ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಈ ಕುರಿತು ಮೇಲಾಧಿಕಾರಿಗಳು ತನಿಖೆ ನಡೆಸಿ, ವಾಸ್ತವಾಂಶವನ್ನು ಸಾರ್ವಜನಿಕರ ಮುಂದಿಡಬೇಕೆಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Post a Comment

Previous Post Next Post