ಕಾರಟಗಿ : ತಾಲೂಕು ಪಂಚಾಯತಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಆಡಳಿತ ವೈಫಲ್ಯದ ಆರೋಪಗಳು ದಿನೇದಿನೇ ಗಂಭೀರ ಸ್ವರೂಪ ಪಡೆಯುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ ಐದಾರು ವರ್ಷಗಳಿಂದ ಕಾರಟಗಿ ತಾಲೂಕು ಪಂಚಾಯತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿದಿರುವ ಲಕ್ಷ್ಮೀದೇವಿ ಅವರ ವಿರುದ್ಧ ಅನೇಕ ಪ್ರಶ್ನೆಗಳು ಉದ್ಭವವಾಗಿವೆ.
ಕಾರಟಗಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವೀ ಯಾದವ್.
ಸಾಮಾನ್ಯವಾಗಿ ಸರ್ಕಾರದ ನಿಯಮಾನುಸಾರ ಅಧಿಕಾರಿಗಳನ್ನು ನಿಗದಿತ ಅವಧಿಗೆ ವರ್ಗಾವಣೆ ಮಾಡಬೇಕಾಗಿದ್ದರೂ, ಕಾರಟಗಿ ತಾಲೂಕು ಪಂಚಾಯತಿಯಲ್ಲಿ ಮಾತ್ರ ಒಂದೇ ಅಧಿಕಾರಿಯ ದೀರ್ಘಕಾಲೀನ ಹುದ್ದೆ ಮುಂದುವರಿದಿರುವುದು ಅನುಮಾನಗಳಿಗೆ ಕಾರಣವಾಗಿದೆ. “ಯಾರ ಆಶ್ರಯದಲ್ಲಿ ಈ ಅಧಿಕಾರಿಯ ವರ್ಗಾವಣೆ ಆಗುತ್ತಿಲ್ಲ?” ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಚರ್ಚೆಗೆ ಗ್ರಾಸವಾಗಿದೆ.
ತಾಲೂಕು ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಕಾಮಗಾರಿಗಳು, ಅನುದಾನ ಹಂಚಿಕೆ, ಯೋಜನೆಗಳ ಅನುಷ್ಠಾನ ಹಾಗೂ ಕಡತಗಳ ನಿರ್ವಹಣೆಯಲ್ಲಿ ಭಾರೀ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಸಾರ್ವಜನಿಕರಿಂದ ಬಂದ ಅನೇಕ ದೂರುಗಳಿಗೆ ಸಮರ್ಪಕ ಸ್ಪಂದನೆ ಸಿಗದೇ, ಕಡತಗಳು ತಿಂಗಳುಗಟ್ಟಲೆ ಬಾಕಿ ಉಳಿಯುತ್ತಿವೆ ಎನ್ನಲಾಗಿದೆ.
ಕೆಲ ಗ್ರಾಮ ಪಂಚಾಯತಿಗಳಲ್ಲಿ ಖೋಟಾ ದಾಖಲೆಗಳು, ನಕಲಿ ಸಹಿಗಳು, ನಿಯಮ ಬಾಹಿರ ಅನುಮೋದನೆಗಳು ನಡೆದಿದ್ದರೂ ಸಹ, ತಾಲೂಕು ಪಂಚಾಯತಿ ಆಡಳಿತ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ “ಭ್ರಷ್ಟ ಅಧಿಕಾರಿಗಳಿಗೆ ತಾಲೂಕು ಪಂಚಾಯತಿ ರಕ್ಷಾಕವಚವಾಗಿದೆಯೇ?” ಎಂಬ ಪ್ರಶ್ನೆ ಉದ್ಭವಿಸಿದೆ.
ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಯನ್ನು ಉದ್ದೇಶಿಸಿ, ಕಾರಟಗಿ ತಾಲೂಕು ಪಂಚಾಯತಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳು, ಅನುದಾನ ಬಳಕೆ ಮತ್ತು ಆಡಳಿತ ಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ, ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ಮುಂದುವರಿದಿರುವ ಅಧಿಕಾರಿಗಳ ವರ್ಗಾವಣೆ ಮಾಡಿ, ಆಡಳಿತವನ್ನು ಶುದ್ಧೀಕರಿಸಬೇಕೆಂದು ಒತ್ತಾಯಿಸಿದ್ದಾರೆ.
“ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕಾದರೆ ಮೊದಲು ತಾಲೂಕು ಪಂಚಾಯತಿಯಲ್ಲಿರುವ ಭ್ರಷ್ಟಾಚಾರದ ಬೇರು ಕಿತ್ತುಹಾಕಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಜಿಲ್ಲೆಯ ಜನರ ಗಮನ ಕಾರಟಗಿ ತಾಲೂಕು ಪಂಚಾಯತಿಯತ್ತ ನೆಟ್ಟಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಿದೆ.

