⭕ ಮಹಿಳೆಯರಿಗೆ ಸಿಕ್ಕ ಅಧಿಕಾರ ಪತಿಗಳ ಪಾಲು : ಪಂಚಾಯತಿಗಳಲ್ಲಿ ಪ್ರಜಾಪ್ರಭುತ್ವವೇ ಅಪಹರಣವಾದ ಆರೋಪ!
⭕ ಕ್ರಮ ಕೈಗೊಳ್ಳಬೇಕಾದ ಉನ್ನತ ಅಧಿಕಾರಿಗಳ ಮೌನ: ಪಂಚಾಯತಿ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನರಕ.
ಕಾರಟಗಿ: ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು (50%) ಮೀಸಲಾತಿಯನ್ನು ಸರಕಾರ ಕಲ್ಪಿಸಿದೆ. ಭಾರತದ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಮತ್ತು ಸಬಲೀಕರಣವನ್ನು ಖಚಿತಪಡಿಸಲು ಈ ಮೀಸಲಾತಿಯನ್ನು ಜಾರಿಗೆ ತರಲಾಗಿದೆ.
ಆದರೂ ಸಹ, ಕಾರಟಗಿ ತಾಲೂಕಿನ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಈಗ “ಮಹಿಳಾ ಆಡಳಿತ” ಬದಲೂ, “ಪತಿ ರಾಯರ ದರ್ಬಾರ್”ವೇ ನಡೆಯುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಸಿಡಿದೆದ್ದಿದೆ.
ಸಿದ್ದಾಪುರ, ಮರ್ಲಾನಹಳ್ಳಿ, ಯರಡೋಣ, ಬೂದಗುಂಪ,ಬೆನ್ನೂರು, ಉಳೇನೂರು,ಬರಗೂರು ಬೇವಿನಹಾಳ ಸೇರಿದಂತೆ ಹಲವು ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತ ಮಹಿಳಾ ಅಧ್ಯಕ್ಷೆಯರು ಮತ್ತು ಸದಸ್ಯೆಯರು ಕೇವಲ ಹೆಸರಿನ ಪ್ರತಿನಿಧಿಗಳಾಗಿದ್ದು, ನಿಜವಾದ ಅಧಿಕಾರ ಅವರ ಪತಿಗಳ ಕೈಯಲ್ಲಿದೆ ಎಂಬ ಮಾತು ಗ್ರಾಮಸ್ಥರ ನಡುವೆ ಬಹಿರಂಗ ಚರ್ಚೆಯ ವಿಷಯವಾಗಿದೆ.
ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಅಧಿಕೃತ ಹುದ್ದೆಯೇ ಇಲ್ಲದ ಕೆಲ “ಪತಿ ರಾಯರು” ಅಧಿಕಾರಿಗಳಂತೆ ಕುಳಿತು ಸಿಬ್ಬಂದಿಗೆ ಸೂಚನೆ ನೀಡುವುದು, ಕಡತಗಳಲ್ಲಿ ಹಾಗೂ ಆಡಳೀತದಲ್ಲಿ ಹಸ್ತಕ್ಷೇಪ ಮಾಡುವುದು, ಕಾಮಗಾರಿಗಳ ಬಗ್ಗೆ ತೀರ್ಮಾನಿಸುವುದು, ಗುತ್ತಿಗೆದಾರರ ಜೊತೆ ವ್ಯವಹರಿಸುವುದು, ಸಾರ್ವಜನಿಕರ ಅರ್ಜಿಗಳನ್ನು ವಿಚಾರಿಸುವುದು ಹೀಗೆ ಅನೇಕ ರೀತಿಯಲ್ಲಿ ಕಾನೂನು ಮೀರಿ ನಡೆದುಕೋಳ್ಳೂತ್ತಿದ್ದಾರೆ ಎನ್ನಲಾಗಿದೆ.
“ಅಧ್ಯಕ್ಷೆಯರ ಮತ್ತು ಸದಸ್ಯೆಯರ ಸಹಿ ಮಾತ್ರ ಮಹಿಳೆಯರದ್ದು… ಆಡಳಿತ, ಒತ್ತಡ, ನಿರ್ಧಾರ ಎಲ್ಲವೂ ಪತಿಗಳದ್ದು!” ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಕೆಲ ಗ್ರಾಮಸ್ಥರ ಪ್ರಕಾರ, ಸಭೆಗಳಲ್ಲಿ ಮಹಿಳಾ ಅಧ್ಯಕ್ಷೆಯರು ಮತ್ತು ಸದಸ್ಯೆಯರು ಮೌನವಾಗಿದ್ದು, ಅವರ ಪರವಾಗಿ ಪತಿಗಳೇ ಮಾತನಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಗ್ರಾಮ ಪಂಚಾಯತಿ ಎಂಬ ಸಂವಿಧಾನಬದ್ಧ ಸಂಸ್ಥೆಯ ಗೌರವವೇ ಹರಾಜಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಮಹಿಳಾ ಮೀಸಲಾತಿಯ ಉದ್ದೇಶ ಮಹಿಳೆಯರನ್ನು ರಾಜಕೀಯವಾಗಿ ಸ್ವಾವಲಂಬಿಗಳನ್ನಾಗಿಸುವುದು, ಆದರೆ ಇಲ್ಲಿ ಮಹಿಳೆಯರನ್ನು “ರಬ್ಬರ್ ಸ್ಟ್ಯಾಂಪ್”ಗಳನ್ನಾಗಿ ಮಾಡಿ, ಅಧಿಕಾರವನ್ನು ಕುಟುಂಬದ ಪುರುಷರು ಬಳಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿದೆ.
ಗ್ರಾಮ ಪಂಚಾಯತಿ ಕಚೇರಿಗಳು ಈಗ “ಜನರ ಕಚೇರಿ”ಗಿಂತ “ಕುಟುಂಬದ ಪ್ರಭಾವದ ಅಡ್ಡೆ”ಗಳಾಗುತ್ತಿವೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಇನ್ನೂ ಆತಂಕಕಾರಿ ಸಂಗತಿ ಏನೆಂದರೆ, ಪತಿರಾಯರ ಈ ದರ್ಬಾರ್ ದಿಂದ ಗ್ರಾಮ ಪಂಚಾಯತಿಗಳ ಪಿಡಿಓ, ಕಾರ್ಯದರ್ಶಿ ಸೇರಿದಂತೆ ಸಿಬ್ಬಂದಿಗಳು ಹಿಂಸೆ, ನರಕಯಾತನೆ ಅನುಭವಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕಾ ಪಂಚಾಯತಿಯ ಅಧಿಕಾರಿಗಳು ನೋಡುತ್ತಿದ್ದರೂ ಸಹ, ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ. “ಅಧಿಕಾರಿಗಳ ಮೌನವೇ ಪತಿ ರಾಯರ ದರ್ಬಾರಿಗೆ ಬಲತಂದೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜನರು ಮತ ಹಾಕಿದ್ದು ಮಹಿಳೆಯರಿಗೆ; ಆದರೆ ಅಧಿಕಾರ ನಡೆಸುತ್ತಿರುವುದು ಅವರ ಪತಿಗಳು. ಇದು ಮಹಿಳಾ ಮೀಸಲಾತಿಯ ಆತ್ಮಹತ್ಯೆ” ಎಂದು ಹಲವಾರು ಪ್ರಜ್ಞಾವಂತರು ಆಕ್ರೋಶ ಹೊರಹಾಕುತ್ತೀದ್ದಾರೆ.
ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಅನಧಿಕೃತ ಹಸ್ತಕ್ಷೇಪ, ಅಧಿಕಾರದ ದುರುಪಯೋಗ ಹಾಗೂ ಮಹಿಳಾ ಜನಪ್ರತಿನಿಧಿಗಳ ಹೆಸರಿನಲ್ಲಿ ನಡೆಯುತ್ತಿರುವ ಈ ನೆರಳು ಆಡಳಿತದ ಬಗ್ಗೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ರಾಜ್ಯ ಸರ್ಕಾರ ಗಂಭೀರವಾಗಿ ಕಠಿಣ ಕಾನೂನು ಕ್ರಮ ಕೈಗೊಂಡು, ಪ್ರಜಾಪ್ರಭುತ್ವ, ಮಹೀಳಾ ಮೀಸಲಾತಿಯನ್ನು ಎತ್ತಿಹಿಡಿಯುವುದರ ಜೋತೆಗೆ ಪತಿರಾಯರ ದರ್ಬಾರ್ ದಿಂದ ಹಿಂಸೆ, ನರಕಯಾತನೆ ಅನುಭವಿಸುತ್ತಿರುವ ಗ್ರಾಮ ಪಂಚಾಯತಿಗಳ ಪಿಡಿಓ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳನ್ನು ರಕ್ಷೀಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.




