ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ 1 ಮತ್ತು 2ನೇ ವಾರ್ಡಿನ ಜನರಿಗೆ ಹಲವು ದಿನಗಳಿಂದ ಕಡಿಮೆ ವೋಲ್ಟೇಜ್ ಹಾಗೂ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಾಗುತ್ತಿತ್ತು. ಗ್ರಾಮಸ್ಥರ ಈ ಸಂಕಷ್ಟವನ್ನು ಮನಗಂಡ ಗ್ರಾಮದ ಯುವ ಮುಖಂಡರಾದ ಮಲ್ಲಿಕಾರ್ಜುನಗೌಡ ಹೊಸಮನಿ, ಪಂಪನಗೌಡ ಹೊಸಮನಿ, ಶರಣಪ್ಪ ಗುಂಡೇಗೌಡ್ರು, ದೊಡ್ಡನಗೌಡ ಮಾಲಿ ಪಾಟೀಲ್, ಶರಣಪ್ಪ ಹೊಸಳ್ಳಿ, ರಾಘವೇಂದ್ರ ಭೊವಿ, ಶಿವು ಸುಂಕದ್, ವೀರೇಶ ಗಣಚಾರಿ, ಕಾರ್ತಿಕ್ ಕೃಷ್ಣಾಪೂರ (ಅರಳಹಳ್ಳಿ) ಸೇರಿದಂತೆ ಹಲವರು ಒಗ್ಗೂಡಿ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರು.
ಗ್ರಾಮದಲ್ಲಿ ಬಳಕೆಯಾಗುತ್ತಿದ್ದ 63 ಕೆ.ವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ (TC) ಜನರ ಅವಶ್ಯಕತೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಮನೆಮಠಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರಿವರ್ತಕದ ಸಾಮರ್ಥ್ಯವನ್ನು 100 ಕೆ.ವಿ ವರೆಗೆ ಹೆಚ್ಚಿಸುವಂತೆ ಯುವ ಮುಖಂಡರು ನಿರಂತರವಾಗಿ ಒತ್ತಾಯಿಸಿದ್ದರು.ಇದಕ್ಕೆ ಗ್ರಾಮ ಪಂಚಾಯತಿಯವರು ಸಹ ಶಿಫಾರಸ್ಸು ನೀಡಿ, ಯುವ ಮುಖಂಡರ ಜನಹಿತ ಕೆಲಸಕ್ಕೆ ಬೆಂಬಲಿಸಿದ್ದರು. ಯುವ ಮುಖಂಡರ ಬೇಡಿಕೆಗೆ ಸ್ಪಂದಿಸಿದ ಕಾರ್ಯನಿರ್ವಾಹಕ ಅಭಿಯಂತರ ಎಂ.ವಿರೇಶ, ಸಹಾಯಕ ಕಾರ್ಯನಿರ್ವಾಹಕ ಮಂಜುನಾಥ, ಸಹಾಯಕ ಇಂಜಿನಿಯರ್ ನೂರ್ ಫಾತಿಮಾ, ಕಿರಿಯ ಅಭಿಯಂತರ ಪ್ರಸಾದ್, ಲೈನ್ ಮ್ಯಾನ್ ಮಳಿಯಪ್ಪ (ಮಣಿ) ಸೇರಿದಂತೆ ಜೆಸ್ಕಾಮ್ ಕಂಪನಿಯು ಇದೀಗ 100 ಕೆ.ವಿ ಸಾಮರ್ಥ್ಯದ ಹೊಸ ಪರಿವರ್ತಕವನ್ನು ಅಳವಡಿಸಿದೆ. ಇದರೊಂದಿಗೆ ಗ್ರಾಮದಲ್ಲಿ ವಿದ್ಯುತ್ ಒತ್ತಡದ ಸಮಸ್ಯೆ ನಿವಾರಣೆಯಾಗಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿ, ಜೆಸ್ಕಾಮ್ ಕಂಪನಿ ಹಾಗೂ ಕಂಪನಿಯ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಕಾರ್ತಕ್ಕೆ ಶ್ಲಾಘನೆ ವ್ಯಕ್ತಪಡಿಸೀದ್ದಾರೆ.
ಗ್ರಾಮದ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಯುವ ಮುಖಂಡರು ಕೈಗೊಂಡ ಹೋರಾಟಕ್ಕೆ ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, “ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳನ್ನು ಒತ್ತಾಯಿಸಿ ಕೆಲಸ ಮಾಡಿಸುವ ಯುವ ನಾಯಕರಿಂದ ಗ್ರಾಮಕ್ಕೆ ಉತ್ತಮ ಸೌಲಭ್ಯಗಳು ದೊರೆಯುತ್ತಿವೆ” ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.


