Kalyanarajya

ತುಂಗಭದ್ರಾ ಅಣೆಕಟ್ಟಿನ ಭವಿಷ್ಯತ್ವ ಮುಖ್ಯ - ಶರಣೇಗೌಡ ಮಾಲಿಪಾಟೀಲ್.

 ಕಾರಟಗಿ : ತಾತ್ಕಾಲಿಕ ಅನೂಕೂಲಕ್ಕಿಂತ ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡಬೇಕು,ಜೀವನಾಡಿ ತುಂಗಭದ್ರಾ ವಿಷಯದಲ್ಲಿ ರಾಜಕೀಯ ಬೇಡ ಎಂದು ಕಾರಟಗಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಶರಣೇಗೌಡ ಎಂ.ಮಾಲಿಪಾಟೀಲ್ ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತುಂಗಭದ್ರ ಜಲಾಶಯ ಈ ಭಾಗದ ಜೀವನಾಡಿ. ಕೇವಲ ನೀರು ಬಳಕೆಗೆ ಉತ್ಸಾಹ ತೋರುವುದಷ್ಟೇ ಅಲ್ಲ. ಜಲಾಶಯದ ಆರೋಗ್ಯದ ಕುರಿತು ನಾವೆಲ್ಲರೂ ಪಕ್ಷಾತೀತವಾಗಿ ಯೋಚಿಸುವುದು ಒಳಿತು.

ಈ ಭಾಗದ ಅನೇಕ ರೈತರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಎಲ್ಲರ ಒಕ್ಕೊರಲಿನ ಅಭಿಪ್ರಾಯ ಒಂದೇ ಆಗಿದೆ ಬೆಳೆಗೆ ನೀರು ಬಿಡದಿದ್ರು ಚಿಂತೆ ಇಲ್ಲ, ಭವಿಷ್ಯದಲ್ಲಿ ಜಲಾಶಯಕ್ಕೆ ಯಾವುದೇ ಸಮಸ್ಯೆ ಬಾರದಂತೆ ಈಗಲೇ ಎಚ್ಚರಿಕೆ ವಹಿಸಿ ಗೇಟ್ ಕಾಮಗಾರಿ ನಿರ್ವಹಿಸಬೇಕು.

ಕೇಂದ್ರ ಜಲನಿರ್ವಹಣಾ ಮಂಡಳಿಯ ನಿರ್ದೇಶನದಂತೆ ಕರ್ನಾಟಕ ಸರ್ಕಾರವು ನೀರಿನ ಸಂಗ್ರಹ ಸಾಮರ್ಥ್ಯವನ್ನು 80 ಟಿಎಂಸಿಗೆ ನಿಗದಿಪಡಿಸಿ, ಬೇಸಿಗೆ ಬೆಳೆಗೆ ನೀರು ಸ್ಥಗಿತಗೊಳಿಸಿ, ಜಲಾಶಯದ ಗೇಟ್ ಗಳನ್ನು ದುರಸ್ತಿಗೊಳಿಸಲಾಗುವುದು ಎಂದು ಹೇಳಿದೆ. ಅದರಂತೆಯೇ ಬಹುತೇಕ ರೈತರು ಇವತ್ತಿನವರೆಗೂ ಸಸಿ ಮಡಿಗಳನ್ನು ಹಾಕಿಲ್ಲ. ಈಗ ಸಸಿ ಮಡಿ ಹಾಕಿ 40 ದಿನಗಳ ನಂತರ ಭತ್ತ ನಾಟಿ ಮಾಡಿದರೆ ಬೆಳೆ ಬರುವುದಕ್ಕೆ ಎಪ್ರಿಲ್ ಕೊನೆವರೆಗೂ ನೀರು ಬಿಡಬೇಕಾಗಬಹುದು.ಈ ಸಂದರ್ಭದಲ್ಲಿ ಇದು ಅವೈಜ್ಞಾನಿಕವಾಗುತ್ತದೆ. ಸುಗ್ಗಿ ಬೆಳೆಗೆ ಅದರ ಪರಿಣಾಮ ನಾವು ಎದುರಿಸಬೇಕಾಗುತ್ತದೆ.

ಮಾಜಿ ಶಾಸಕ ಬಸವರಾಜ ದಢೇಸುಗೂರು ಅವರು ಒಬ್ಬ ರೈತನೆಂದು ಹೇಳಿಕೊಳ್ಳುತ್ತಾರೆ. ಸದಾ ತುಂಗಭದ್ರಾ ಜಪ ಮಾಡುತ್ತಾರೆ. ಜಲಾಶಯದ ಶಾಶ್ವತ ಪರಿಹಾರದ ಕುರಿತು ಯೋಚಿಸುವುದು ಬಿಟ್ಟು ರೈತರನ್ನು ದಿಕ್ಕು ತಪ್ಪಿಸಿ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಯಶಸ್ವಿ ಆಗುವುದಿಲ್ಲ. ಈ ಮಣ್ಣು ಮತ್ತು ನೀರು ಒಳ್ಳೆಯದನ್ನಷ್ಟೇ ಸ್ವೀಕರಿಸುತ್ತವೆ. ಕೆಟ್ಟದ್ದನ್ನು ದಡಕ್ಕೆ ಸೇರಿಸುತ್ತವೆ. ಅದನ್ನು ಮಾಜಿ ಶಾಸಕರು ಅರ್ಥ ಮಾಡಿಕೊಂಡು ಪ್ರತಿಭಟನೆ ಕೈ ಬಿಡಬೇಕು. ರೈತ ಹಿತಕ್ಕೆ ದಕ್ಕೆ ತರುವ ಇಂತಹ ಪ್ರತಿಭಟನೆಗಳಿಗೆ ಯಾವುದೇ ನೈಜ ರೈತರುಗಳು ಬೆಂಬಲ ನೀಡುವುದಿಲ್ಲ.

ಜಲಾಶಯ ಮತ್ತು ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡುವುದು ಬೇಡ. ಇವತ್ತಿನ ಪರಿಸ್ಥಿತಿ ಒಂದೇ ಬೆಳೆಗೆ ನೀರು ಪಡೆಯುವುದಲ್ಲ. ನಮ್ಮ ಮುಂದಿನ ಪೀಳಿಗೆಗೆ ನಾವು ಏನನ್ನು ಬಿಟ್ಟು ಹೋಗುತ್ತೇವೆ ಎನ್ನುವುದನ್ನು ಹೃದಯದಿಂದ ಯೋಚಿಸಬೇಕಿದೆ.

ರೈತರು, ರೈತ ಮುಖಂಡರು, ರೈತ ಸಂಘಟನೆಗಳು ಅತ್ಯಂತ ಸೂಕ್ಷ್ಮವಾಗಿ ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ದಳಕ್ಕೆ ಬಲಿಯಾಗಬೇಡಿ. ಅವರ ರಾಜಕೀಯದಾಟಕ್ಕೆ ನಮ್ಮನ್ನು ಬೀದಿಯಲ್ಲಿ ನಿಲ್ಲಿಸುತ್ತಾರೆ. ಜಲಾಶಯದಲ್ಲಿ ನಮ್ಮ ಭವಿಷ್ಯ ಇದೆ. ಅದನ್ನು ನಾವು ಶಾಶ್ವತವಾಗಿ ಪರಿಹರಿಸಲು ಚಿಂತಿಸೋಣ. ಅದಕ್ಕಾಗಿ ನಾವು  ತುಂಗಭದ್ರಾ ಜಲಾನಯನ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ, ಸಚಿವರ ಮೇಲೆ ಒತ್ತಡ ಹಾಕಿ ಗೇಟಗಳ ದುರಸ್ತಿ ಕಡೆ ಗಮನ ಹರಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. 



Post a Comment

Previous Post Next Post