ಕಾರಟಗಿ : ತಾಲೂಕಿನ ಜೆಸ್ಕಾಮ್ ಉಪವಿಭಾಗ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ನಿರ್ವಹಣೆ ಕೆಲಸಗಳಲ್ಲಿ ಬರುವ ವಿದ್ಯುತ್ ತಂತಿ,ಕಂಬ,ಟ್ರಾನ್ಸ್ ಫಾಮ್೯ರ್ ಗಳಿಗೆ ಅಡ್ಡಲಾಗಿ ಬೆಳೆದಿರುವ ಗಿಡ,ಗಂಟಿ,ಜಾಲಿ ಅಂತಹ ಜಂಗಲ್ ಗಳ ಕಟಾವು ಮಾಡದೇ, ಮಾಡಿದ್ದೇವೆ ಎಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿ ಬೋಗಸ್ ಬಿಲ್ ಎತ್ತುವಳಿ ಮಾಡುವ ಮೂಲಕ ಜೆಸ್ಕಾಮ್ ಕಂಪನಿಗೆ ಆರ್ಥಿಕನಷ್ಟ ಉಂಟು ಮಾಡಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಜೆಸ್ಕಾಮ್ ಕಂಪನಿಯು ಮುಂಗಾರು ಪೂರ್ವ ನಿರ್ವಹಣೆ ಕೆಲಸಗಳು ಎಂದು ಟೆಂಡರ್ ಕರೆದು, ಕಡಿಮೆ ಬಿಡ್ ದಾರ ಮ್ಯಾನ್ ಪವರ್ ಏಜೆನ್ಸಿ ಅವರಿಗೆ ಗುತ್ತಿಗೆ ನೀಡಿ, ಜಂಗಲ್ ಕಟಾವು ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಸುತ್ತದೆ.
ಆದರೆ ಕಾರಟಗಿ ಉಪವಿಭಾಗ ಕಛೇರಿಯ ವ್ಯಾಪ್ತಿಯಲ್ಲಿ ಟೆಂಡರ್ ಕರೆದ ರೀತಿಯಲ್ಲಿ ವ್ಯವಸ್ಥಿತವಾಗಿ ಎಲ್ಲವನ್ನೂ ಸಿದ್ದಗೊಳಿಸಿಕೊಂಡು ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿ, ನಿರ್ವಹಿಸಬೇಕಾದ ಮುಂಗಾರು ಪೂರ್ವ ಕೆಲಸಗಳನ್ನು ಮಾಡದೇ, ಕಾಮಗಾರಿಯಲ್ಲಿ ಯಾರಿಗೂ ಕೆಲಸ ನೀಡದೇ, ಮುಂಗಾರು ಪೂರ್ವ ನಿರ್ವಹಣೆ ಕೆಲಸಗಳನ್ನು ಮಾಡಿದ್ದೇವೆ, ಜಂಗಲ್ ಕಟಾವು ಮಾಡಿದ್ದೇವೆ ಎಂದು ಸುಳ್ಳು ಹೇಳಿ, ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ, ಗುತ್ತಿಗೆದಾರ ಆದಯ್ಯ ಹಿರೇಮಠ ಸುಳ್ಳು ಕೂಲಿಕಾರರನ್ನು ತೋರಿಸಿ, ಕೆಲಸ ಮಾಡಿದ್ದಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ, ಬೋಗಸ್ ಬಿಲ್ ಸಲ್ಲಿಸಿದ್ದಾರೆ, ಈ ಭ್ರಷ್ಟ ಗುತ್ತಿಗೆದಾರ ಆದಯ್ಯ ಹಿರೇಮಠನ ಜೊತೆಗೆ ಸೇರಿಕೊಂಡು, ಭ್ರಷ್ಟ ಗುತ್ತಿಗೆದಾರನಿಗೆ ಸಹಕರಿಸಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ಬಿಲ್ ಪಾವತಿ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ಬಹಿರಂಗವಾಗಿರುವ ಮಾಹಿತಿಯಂತೆ ಮೇ ತಿಂಗಳಿನಲ್ಲಿ ₹ 213152, ಸೆಪ್ಟೆಂಬರ್ ತಿಂಗಳಲ್ಲಿ ₹ 213152 ಒಟ್ಟು ₹4,26,305.12 ರೂಪಾಯೊಗಳನ್ನು ಎತ್ತುವಳಿ ಮಾಡಿದ್ದಾರೆ.ಇದು ಬರೀ ಎರೆಡು ತಿಂಗಳ ಕಥೆಯಲ್ಲ ಹಲವಾರು ತಿಂಗಳು ಇದೇ ರೀತಿ ಯಾವುದೇ ಕೆಲಸ ಮಾಡದೇ ಬೋಗಸ್ ಬಿಲ್ ಎತ್ತುವಳಿ ಮಾಡಿದ್ದಾರೆ ಎನ್ನುವ ವದಂತಿ ಇದೆ. ಹೀಗೆ ಇಂಧನ ಇಲಾಖೆಯ ಜೆಸ್ಕಾಮ್ ಕಂಪನಿಯ ಲಕ್ಷಾಂತರ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡು, ಜೆಸ್ಕಾಮ್ ಕಂಪನಿಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ , ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿರುವ, ತಪ್ಪಿತಸ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ಇವರನ್ನು ಹುದ್ದೆಯಿಂದ ವಜಾಗೊಳಿಸಿ, ಭ್ರಷ್ಟ ಗುತ್ತಿಗೆದಾರ ಆದಯ್ಯ ಹಿರೇಮಠ ಈತನ ಗುತ್ತಿಗೆ ಪರವಾನಿಗೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ, ಪಾವತಿಯಾಗಿರುವ ಬಿಲ್ ನ್ನು ದಂಡ ಹಾಗೂ ಬಡ್ಡಿ ಸಮೇತ ಮರುಪಾವತಿ ಮಾಡಿಕೊಳ್ಳಬೇಕು, ಇಲ್ಲವಾದಲ್ಲಿ ಇಂಧನ ಇಲಾಖೆಯ ಮಾನ-ಮರ್ಯಾದೆ ಹಾಳಾಗಿವುದಲ್ಲದೇ, ಜೆಸ್ಕಾಮ್ ಕಂಪನಿಯು ಬೀದಿಗೆ ಬರುವುದರಲ್ಲಿ ಎರೆಡು ಮಾತಿಲ್ಲ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
Tags
ಭ್ರಷ್ಟರ ಬೇಟೆ




